Index   ವಚನ - 8    Search  
 
ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ. ನಾನು ಸ್ವರ್ಗ ಮರ್ತ್ಯ ಪಾತಾಳದೊಳಗುಳ್ಳ ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ ಎನ್ನ ಚತುರಂಗಬಲಕ್ಕೆ ಬೇಡಿದ ಪಡಿ ಕಂದಾಯಮಂ ಕೊಟ್ಟುಕೊಟ್ಟು ನಷ್ಟವಾಗಿ ಎನಗೆ ಎರಡುನಲವತ್ತೆರಡು ಲಕ್ಷದ ಭವರಾಟಳದ ಋಣಬಿದ್ದಿತ್ತ ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು. ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ ತೆಗೆಯಿತು. ಎನ್ನ ನಂಬಿ ಕೆಡಬೇಡ ಕೆಡಬೇಡ. ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ. ಅಜ್ಞಾನ ತಮಕ್ಕೆ ಜ್ಯೋತಿಃಪ್ರಕಾಶವನುಳ್ಳ ಸಮ್ಯಜ್ಞಾನವೇ ನೀನು ಕೇಳಯ್ಯ. ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ. ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ. ಎನ್ನೊಳಗೆ ನೀನು ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ ನೀನೂ ನಾನೂ ಗೋಳಕಾಕಾರಸ್ವರೂಪವಾದ ನಿಷ್ಕಲ ಬ್ರಹ್ಮದಲ್ಲಿ ಉದಯವಾದ ಸಹೋದರರು. ಎಂಟು ಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ ಸುವರ್ಣ ವರ್ಣದ ಸಿಂಹಾಸನದ ಮೇಲಿಪ್ಪ ಮನೋನಾಥನೆನಗೆ ಕಾಣಿಸಿ "ನಿನ್ನ ಶ್ರೀ ಚರಣಮಂ ಎಂದೆಂದೂಪೂಜೆ ಮಾಡುವ ಭೃತ್ಯ"ನೆಂದು ಭಯಭಕ್ತಿಯಿಂದ ಬಣ್ಣಿಸಿ ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟುಮಾಡು. ಚಿದಾಕಾಶದಲ್ಲಿ, ಆರು ಮೂರಾಗಿ ಮೂರು ಒಂದಾಗಿ ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ ಎನ್ನನಿಕ್ಕಿ "ನಿನ್ನ ಆದಿ ಅನಾದಿಯ ಹಳೆಯ" ನೆಂದು ಬಿನ್ನಪಂಗೈದು ಕರುಣಾರಸಮಂ ಬೀರಿಸಿ ಎನಗೆ ಮುಕ್ತಿರಾಜ್ಯಮಂ ಕೊಡುವಂತೆ ಸಂಧಾನಮಂ ಮಾಡು. ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ ಅಭಯ ಹಸ್ತಮಂ ಕೊಡಿಸಿ ಎನ್ನ ಎಂಬತ್ತುನಾಲ್ಕುಲಕ್ಷ ಭವರಾಟಾಳದ ಋಣವ ತಿದ್ದುವಂತೆ ಮಾಡಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.