Index   ವಚನ - 9    Search  
 
ಆರುಬಣ್ಣದ ಹದಿನೈದು ದೇಹದ ಕೋಡಗ ಒಂದು ರತ್ನವ ಮೆಟ್ಟಿಕೊಂಡು ಒಂದು ರತ್ನವ ಹಿಡಿದುಕೊಂಡು ಮತ್ತೊಂದು ರತ್ನವ ಮರೆಮಾಡಿಕೊಂಡು ಮೇರುಪರ್ವತವ ಶಿಖರವನೇರಿತು ನೋಡಾ. ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ ಆ ಪಟ್ಟಣದ ಪ್ರಜೆ ಪರಿವಾರಂಗಳ ಕೈಕಾಲುಗಳಂ ಕೊಯ್ದು ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ ತನ್ನಿಂದ ತಾನೇ ಸತ್ತೀತು. ಭಕ್ತಿಯೆಂಬ ಬಿಲ್ಲ ಹಿಡಿದು ನಿರಹಂಕಾರವೆಂಬ ತಿರುವನೇರಿಸಿ ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು ಆ ರತ್ನಂಗಳಂ ಕೊಂಡು ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.