ಆರುಬಣ್ಣದ ಹದಿನೈದು ದೇಹದ ಕೋಡಗ
ಒಂದು ರತ್ನವ ಮೆಟ್ಟಿಕೊಂಡು
ಒಂದು ರತ್ನವ ಹಿಡಿದುಕೊಂಡು
ಮತ್ತೊಂದು ರತ್ನವ ಮರೆಮಾಡಿಕೊಂಡು
ಮೇರುಪರ್ವತವ ಶಿಖರವನೇರಿತು ನೋಡಾ.
ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ
ಆ ಪಟ್ಟಣದ ಪ್ರಜೆ ಪರಿವಾರಂಗಳ ಕೈಕಾಲುಗಳಂ ಕೊಯ್ದು
ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ
ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು
ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ
ತನ್ನಿಂದ ತಾನೇ ಸತ್ತೀತು.
ಭಕ್ತಿಯೆಂಬ ಬಿಲ್ಲ ಹಿಡಿದು ನಿರಹಂಕಾರವೆಂಬ ತಿರುವನೇರಿಸಿ
ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು
ಆ ರತ್ನಂಗಳಂ ಕೊಂಡು
ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.