ಅಯ್ಯ
ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ
ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ
ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ
ಪ್ರಣವವಾಯಿತ್ತಯ್ಯ
ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ
ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತ್ತಯ್ಯ.
ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ
ತನ್ನ ನಿರಂಜನ ಶಕ್ತಿಯ ನಸುನೆನಹಿಂದ
ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ
ಮೊಳೆದೋರಿತ್ತಯ್ಯ.
ಆ ಶುದ್ಧಪ್ರಸಾದವೆಂಬ ಮೊಳೆ
ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ
ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ
ಕಲಾಪುಂಜರಂಜಿತವಪ್ಪ
ಹನ್ನೊಂದನೂರು ದಳದ ಪತ್ರದಲ್ಲಿ
ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ
ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ.
ಆ ಸಿದ್ಧಪ್ರಸಾದವೆಂಬ ಎಳವೆರೆ
ತನ್ನ ಶಾಂತಶಕ್ತಿಯ ಚಲನೆಯಿಂದ
ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ
ಪ್ರಸಿದ್ಧ ಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ.
ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ
ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ
ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು.
ಆ ಹೂಗಳ ಮಹಾಕೂಟದಿಂದ
ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು.
ಆ ಹಣ್ಣುಗಳ ಆದ್ಯಂತಮಂ ಪಿಡಿದು
ಸದ್ಯೋನ್ಮುಕ್ತಿಯಾಗಬೇಕೆಂದು
ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು
ತಿಳಿದು ನೋಡಿ ಕಂಡು
ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ
ಜ್ಞಾನ ಕ್ರೀಗಳೆಂಬ ದೃಢದಿಂದೇರಿ
ನಾಲ್ಕೆಲೆಯ ಪೀತವರ್ಣದ ಹಣ್ಣ
ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು
ಆರೆಲೆಯ ನೀಲವರ್ಣದ ಹಣ್ಣ
ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು
ಹತ್ತೆಲೆಯ ಸ್ಫಟಿಕವರ್ಣದ ಹಣ್ಣ
ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು
ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ
ಸುಮನನೆಂಬ ಹಸ್ತದಲ್ಲಿ ಪಿಡಿದು
ಹದಿನಾರೆಲೆಯ ಮಿಂಚುವರ್ಣದ ಹಣ್ಣ
ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು
ಆಸನಸ್ಥಿರವಾಗಿ ಕಣ್ಮುಚ್ಚಿ
ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ
ರೇಚಕ ಪೂರಕ ಕುಂಭಕಂಗೈದು
ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ
ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ
ಸಿಂಹನಾದಂಗಳಂ ಕೇಳಿ ಹರುಷಂಗೊಂಡು
ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ
ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ
ದಶವಾಯುಗಳ ಹೆಸಗೆಡಿಸಿ
ಅಷ್ಟಮದಂಗಳ ಹಿಟ್ಟುಗುಟ್ಟಿ
ಅಂತಃಕರಣಂಗಳ ಚಿಂತೆಗೊಳಗುಮಾಡಿ
ಮೂಲಹಂಕಾರವ ಮುಂದುಗೆಡಿಸಿ
ಸಪ್ತವ್ಯಸನಂಗಳ ತೊತ್ತಳದುಳಿದು
ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ
ಕರ್ಮೇಂದ್ರಿಯಂಗಳ ಕಾಲಮುರಿದು
ತನ್ಮಾತ್ರೆಯಂಗಳ ತೋಳಕೊಯ್ದು,
ಅರಿಷಡ್ವರ್ಗಂಗಳ ಕೊರಳನರಿದು
ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ-
ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ
ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ
ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು
ಓಂಕಾರವೆಂಬ ಮಂತ್ರದಿಂ ಸಂತೈಸಿ
ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ
ಆ ಪರಬ್ರಹ್ಮವೆ ತಾನೆಯಾಗಿ
ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ
ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ
ನಿರ್ಭಾವವೆಂಬ ಹಸ್ತದಿಂ ಪಿಡಿದು
ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ
ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ
ಆ ನಿಷ್ಕಲಬ್ರಹ್ಮವೇ ತಾನೆಯಾಗಿ
ಮೂರುಮಂಟಪದ ಮಧ್ಯದ ಕುಸುಮ ಪೀಠದಲ್ಲಿಪ್ಪ
ಶೂನ್ಯಬ್ರಹ್ಮದ ಶೂನ್ಯಪಾದಮಂ
ನಿಷ್ಕಲವೆಂಬ ಹಸ್ತದಿಂ ಪಿಡಿದು
ಕ್ಷಕಾರವೆಂಬ ಮಂತ್ರದಿಂ ಸಂತೈಸಿ
ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ
ಆ ಶೂನ್ಯಬ್ರಹ್ಮವೇ ತಾನೆಯಾಗಿ-
‘ನಿಶಬ್ದಂ ಬ್ರಹ್ಮ ಉಚ್ಯತೇ’ ಎಂಬ
ಒಂಬತ್ತು ನೆಲೆಯ ಮಂಟಪದೊಳಿಪ್ಪ
ನಿರಂಜನಬ್ರಹ್ಮದ ನಿರಂಜನಪಾದಮಂ
ಶೂನ್ಯವೆಂಬ ಹಸ್ತದಿಂ ಪಿಡಿದು
ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ
ಬಯಲ ಬಯಲು ಬೆರಸಿದಂತೆ
ನಿರಂಜನಬ್ರಹ್ಮವೇ ತಾನೆಯಾಗಿ ಮಹಾಗುರು ಸಿದ್ಧಲಿಂಗಪ್ರಭುವಿನ
ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು.
ಎನ್ನ ಹೃದಯಕಮಲದೆಂಟು ಮಂಟಪದ
ಚತುಷ್ಪತ್ರಿಕಾ ಮಧ್ಯದ ಪದ್ಮಪೀಠದಲ್ಲಿ
ಎನ್ನ ತಂದೆ ಸುಸ್ಥಿರವಾಗಿ
ಎನಗೆ ಷಟ್ಸ್ಥಲಮಾರ್ಗ-ಪುರಾತರ ವಚನಾನುಭಾವ-
ಭಕ್ತಿ ಜ್ಞಾನ ವೈರಾಗ್ಯವೆಂಬ
ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ.
ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ
ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು
ಮೀಟು ಜವ್ವನೆಯಾದೆನಯ್ಯ ನಾನು.
ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು
ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ.
ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ
ಪರಂಜ್ಯೋತಿಲಿಂಗವೆ
ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು.
ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ
ಕಂಠಮಾಲೆಯಂ ಧರಿಸು.
ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ
ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು.
ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ
ರತ್ನದ ಕರ್ಣಾಭರಣಂಗಳಂ ತೊಡಿಸು.
ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು.
ಕ್ರೀಯಲ್ಲದೆ ನಿಷ್ಕ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು.
ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ
ಕನಕಲತೆಯ ಬಾಸಿಂಗಮಂ ಕಟ್ಟು.
ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ
ನವ್ಯದುಕೂಲವನುಡಿಸು.
ಲಿಂಗಾಣತಿಯಿಂದ ಬಂದುದನಲ್ಲದೆ
ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ
ರತ್ನದ ಕಂಕಣವಂ ಕಟ್ಟು.
ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ
ಪರಿಮಳವಂ ಲೇಪಿಸು.
ಶಿವಪದವಲ್ಲದೆ ಚತುರ್ವಿಧ ಪದಂಗಳ ಬಯಸೆನೆಂಬ
ಹಾಲು ತುಪ್ಪಮಂ ಕುಡಿಸು.
ಪ್ರಸಾದವಲ್ಲದೆ ಭಿನ್ನರುಚಿಯಂ ನೆನೆಯೆನೆಂಬ
ತಾಂಬೂಲವನಿತ್ತು ಸಿಂಗರಂಗೆಯ್ಯಯ್ಯಾ.
ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ
ಪ್ರಮಥಗಣಂಗಳ ಮಧ್ಯದಲ್ಲಿ
ಎನ್ನ ಮದುವೆಯಾಗಯ್ಯ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ayya
pan̄catatvaṅgaḷa paḍeva tatva pratyakṣavāgada munna
padmajāṇḍava dharisippa kamaṭha-dikkarigaḷillada munna
nirmalākāśavē sākāravāgi niran̄janavemba praṇavavāyittayya
ā niran̄jana praṇavavemba marujēvaṇiya bīja
hrūṅkāra maṇṭapadalli mūrtigoṇḍitayya.
Ā niran̄jana praṇavavemba marujēvaṇiya bīja
tanna niran̄jana śaktiya nasunenahinda
haṅkāra cakṣuvemba kuhariyalli śud'dhaprasādavemba moḷedōrittayya.
Ā śud'dhaprasādavemba moḷe
tanna śūn'yaśaktiya sejjeyinda
karṇikāprakāśa pan̄canādavanuḷḷa ṣōḍaśa
kalāpun̄jaran̄jitavappa
hannondanūrudaḷada patradalli
praṇavacitravoppittippa hrīṅkāra sinhāsanada mēle
sid'dhaprasādavemba eḷavere taḷirāyittayya.
Ā sid'dhaprasādavemba eḷavere
tanna śāntaśaktiya calaneyinda
mūrubaṭṭeya mēlippa eraḍumaṇṭapada madhyadalli
prasid'dhaprasādavemba mahāvr̥kṣa bīgi beḷeyittayya.
Ā prasid'dhaprasādavemba mahāvr̥kṣa
tanna cicchaktiya līlāvinōdadinda
pan̄caśaktigaḷemba nālkondu hūvāyitu.
Ā hūgaḷa mahākūṭadinda
pan̄caliṅgagaḷemba pan̄caprakārada mūreraḍu haṇṇāyitu.
Ā haṇṇugaḷa ādyantamaṁ piḍidu
sadyōnmuktiyāgabēkendu
sadākāladalli bayasuttippa mahāśivaśaraṇanu
tiḷidu nōḍi kaṇḍu
āruneleya niccaṇigeya ā tarulatege sērisi
jñāna krīgaḷemba dr̥ḍhadindēri
nālkeleya pītavarṇada haṇṇa
sucittavemba hastadalli piḍidu
āreleya nīlavarṇada haṇṇa
subud'dhiyemba hastadalli piḍidu
hatteleya sphaṭikavarṇada haṇṇa
nirahaṅkāravemba hastadalli piḍidu
hannereḍeleya suvarṇavarṇada haṇṇa
sumananemba hastadalli piḍidu
hadināreleya min̄cuvarṇada haṇṇa
sujñānavemba hastadalli piḍidu
āsanasthiravāgi kaṇmucci
jñānacakṣuviniṁ niṭṭisi kaṭṭakkariṁ nōḍi
rēcaka pūraka kumbhakaṅgaidu
peṇdumbiya nāda vīṇānāda ghaṇṭanāda
bhērīnāda mēghanāda praṇavanāda divyanāda
sinhanādaṅgaḷaṁ kēḷi haruṣaṅgoṇḍu
ā phalaṅgaḷaṁ manavemba hastadiṁ maḍiludumbi
māyākōlāhalanāgi pan̄cabhūtaṅgaḷa san̄cava keḍisi
daśavāyugaḷa hesageḍisi
aṣṭamadaṅgaḷa hiṭṭuguṭṭi
antaḥkaraṇaṅgaḷa cintegoḷagumāḍi
mūlahaṅkārava mundugeḍisi
saptavyasanaṅgaḷa tottaḷaduḷidu
jñānēndriyaṅgaḷa nenahugeḍisi
karmēndriyaṅgaḷa kālamuridu
tanmātreyaṅgaḷa tōḷakoydu,
ariṣaḍvargaṅgaḷa koraḷanaridu
sphaṭikada put'thaḷiyante nijasvarūpamāgi-
eraḍesaḷa kamalakarṇikāgradallippa
parabrahmada śvētamāṇikyavarṇada dvipādamaṁ
sujñānavemba hastadalli piḍidu
ōṅkāravemba mantradiṁ santaisi
nīra nīru kūḍidante parabrahmavanoḍagūḍi
ā parabrahmave tāneyāgi
brahmarandhravemba śāmbhavalōkadallippa
niṣkala parabrahmada nirākārapādamaṁ
nirbhāvavemba hastadiṁ piḍidu
pan̄caprasādavemba mantradiṁ santaisi
kṣīrakṣīrava kūḍidante niṣkalabrahmavanoḍagūḍi
ā niṣkalabrahmavē tāneyāgi
mūrumaṇṭapada madhyada kusumapīṭhadallippa
śūn'yabrahmada śūn'yapādamaṁ
niṣkalavemba hastadiṁ piḍidu
kṣakāravemba mantradiṁ santaisi
ghr̥taghr̥tava kūḍidante
śūn'yabrahmavanoḍagūḍi
ā śūn'yabrahmavē tāneyāgi-
‘niśabdaṁ brahma ucyatē’ emba
ombattu neleya maṇṭapadoḷippa
niran̄janabrahmada niran̄janapādamaṁ
śūn'yavemba hastadiṁ piḍidu
hrūṅkāravemba mantradiṁ santaisi
bayala bayalu berasidante
niran̄janabrahmavē tāneyāgi-
mahāguru sid'dhaliṅgaprabhuvina
garbhābdhiyalli janisida bālakiyayya nānu.
Enna hr̥dayakamaleṇṭu maṇṭapada
catuṣpatrikā madhyada padmapīṭhadalli
enna tande susthiravāgi
enage ṣaṭsthalamārga-purātara vacanānubhāva-
bhakti jñāna vairāgyavemba
jēnusakkare paramāmr̥tava taṇiyaluṇisidanayya.
Ā jēnusakkare paramāmr̥tava taṇiyaluṇisaloḍane
enna bālatvaṁ keṭṭu yauvanaṁ baḷedu beḍagu kuḍivaridu
mīṭu javvaneyādenayya nānu.
Enage nijamōkṣavemba manmathavikāravu
ennanaṇḍaledu āḷdu nindalli nilalīsadayya.
Anantakōṭi sōmasūrya prakāśavanuḷḷa paran̄jyōtiliṅgave
enage śivānanda bhaktiyemba tālibandiya kaṭṭu.
Sumantravallade kumantrava nuḍiyenemba
kaṇṭhamāleyaṁ dharisu.
Arpitavallade anarpitava parimaḷisenemba
mauktikada kaṭṭāṇi mūgutiyanikku.
Suśabdhavallade apaśabdava kēḷenemba
ratnada karṇābharaṇaṅgaḷaṁ toḍisu.
Śaraṇatvavanallade jīvatvavanollenemba
tripuṇḍramaṁ dharisu.
Krīyallade niṣkrīya māḍenemba
mauktikada baṭṭanikku.
Nim'mavarigallade an'yarigeragenemba
kanakalateya bāsiṅgamaṁ kaṭṭu.
Samyajñānavallada ajñānava hoddenemba
navyadukūlavanuḍisu.
Liṅgāṇatiyinda bandudanallade
aṅgagatiyinda bandudaṁ muṭṭenemba
ratnada kaṅkaṇavaṁ kaṭṭu.
Śaraṇasaṅgavallade parasaṅgamaṁ māḍenemba
parimaḷavaṁ lēpisu.
Śivapadavallade caturvidhapadaṅgaḷa bayasenemba
hālu tuppamaṁ kuḍisu.
Prasādavallade bhinnaruciyaṁ neneyenemba
tāmbūlavanittu siṅgaraṅgeyyayyā.
Ninna karuṇaprasādavemba vasavanta capparadalli
pramathagaṇaṅgaḷa madhyadalli
enna maduveyāgayyā,
ghanaliṅgiya mōhada cennamallikārjuna.