Index   ವಚನ - 26    Search  
 
ಆಚಾರಲಿಂಗವ ಅಂಗೈಯೊಳಗಳವಡಿಸಿ ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ ಪುಷ್ಪಜಾತಿಗಳಿಂದರ್ಚಿಸಿ ಪೂಜೆಮಾಡುವ ಕರವು ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು. ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು. ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು. ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು. ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು. ಆ ಲಿಂಗವ ನೆನೆವ ಮನ ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು. ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ನೆಲೆಗೊಂಡಿತ್ತು. ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ ಆ ಲಿಂಗವೊಲಿದು ಅಂಗವೇಧಿಸಿ ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು. ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು ಕ್ರೀಯ ಮರೆಯಲೊಡನೆ ಆ ಲಿಂಗವೊಲಿದು ಮನವೇಧಿಸಿ ಭಾವಂಗಳಡಗಿ ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು. ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ ಕರ್ಪೂರ ಹೋಗಿ ಉರಿಯ ಹಿಡಿದಂತಾದ ಸಮಾಧಿಯೋಗದೊಳಿರ್ದು ಜ್ಞಾನವ ಮರೆಯಲೊಡನೆ ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು. ಆತನೇ ಪರಬ್ರಹ್ಮ.ಇದನರಿಯದೆ ಜ್ಞಾನಕ್ರೀಗಳಿಂದಾಚರಿಸಿ ಲಿಂಗಾಂಗ ಸಂಯೋಗವಾಗದೆ ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ ತಮ್ಮ ಅರಿವಿಂಗೆ ತಾವೇ ತಲೆದೂಗಿ `ಅಹಂ ಬ್ರಹ್ಮ'ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.