Index   ವಚನ - 27    Search  
 
ಬೆಳಗು ಕತ್ತಲೆಯೆಂಬ ಕತ್ತಲೆಯ ಬೆಳಗೆಂಬ ಪಶುಮತದ ಪಾಷಂಡಿಗಳು ನೀವು ಕೇಳಿರೇ ಮಲಮಾಯಾಕರ್ಮಗಳು ಆತ್ಮಂಗೆ ಕೇಡಿಲ್ಲದೆ ಅನಾದಿಯಲ್ಲಿಯೂ ಉಂಟೆಂದು ನುಡಿಯುತ್ತಿಪ್ಪಿರಿ. ಕಾಮಧೇನುವಿನ ಗರ್ಭದಲ್ಲಿ ಕತ್ತೆಯ ಮರಿ ಹುಟ್ಟುವುದೆ? ಕಲ್ಪವೃಕ್ಷದಲ್ಲಿ ಕಾಗೆಮಾರಿಯ ಹಣ್ಣು ಬೆಳೆವುದೆ? ಪರುಷದಗಿರಿಯಲ್ಲಿ ಕಬ್ಬುನ ಮೊಳೆದೋರುವುದೆ? ಅನಂತಕೋಟಿ ಮಿಂಚುಗಳ ಪ್ರಭೆಯನೊಳಕೊಂಡ ಪರಶಿವತತ್ವದಲ್ಲಿ ಉದಯವಾದ ಚಿದಂಶಿಕನಪ್ಪ ಪರಮಾತ್ಮಂಗೆ ಅನಾದಿಮಲವನುಂಟು ಮಾಡುವ ಸಿದ್ಧಾಂತಿಯ ಅಡ್ಡವಸ್ತ್ರದಲ್ಲಿಪ್ಪುದು ಒಡ್ಡಗಲ್ಲ ಮುರುಕಲ್ಲದೆ ಲಿಂಗವಲ್ಲ. ಅದೇನು ಕಾರಣವೆಂದರೆ ಇಕ್ಕುವಾಕೆ ಮೂಗು ಮುಚ್ಚಿಕೊಂಡು ಇಕ್ಕಿದ ಬಳಿಕ ಉಂಬಾತ ಹೇಗುಂಬನಯ್ಯ? ಆತ್ಮನು ಅನಾದಿಮಲಾವರಣವೆಂದು ನೀನೆ ಉಸುರುತ್ತಿರ್ದ ಬಳಿಕ ನಿನ್ನಂಗದ ಮೇಲಕ್ಕೆ ಬರುವ ಲಿಂಗಕ್ಕೆ ಮೂಗಿಲ್ಲವೆ? ಪುಣ್ಯಕ್ಷೇತ್ರದಲ್ಲಿ ಲಿಂಗವಿಪ್ಪುದಲ್ಲದೆ ಹಾಳುಕೇರಿಯಲ್ಲಿ ಲಿಂಗವುಂಟೆ? ಇಲ್ಲವೆಂಬುದ ನಿನ್ನ ನೀನೇ ತಿಳಿದು ನೋಡು. ಇದು ಕಾರಣ ದ್ವೆೈತಮಾರ್ಗಕ್ಕೆ ಮುಕ್ತಿಯೆಂಬುದು ಎಂದೆಂದಿಗೂ ಸಟೆ ಹೊರಗೆಂ[ಬೆ]ನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.