Index   ವಚನ - 29    Search  
 
ಭಕ್ತಿ ಜ್ಞಾನ ವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚುಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷುತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆ ಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಜಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ 'ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ? ಭಕ್ತಿ ಜ್ಞಾನ ವೈರಾಗ್ಯ ವಿರಹಿತರಾಗಿ ನಿಜಮುಕ್ತಿಯ ಅರಸುವ ಅಣ್ಣಗಳ ಇರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.