Index   ವಚನ - 30    Search  
 
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾನೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.