Index   ವಚನ - 32    Search  
 
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ,ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು.ಇನ್ನು ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ ಷಟ್ಸ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷ್ಠೆಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡು ದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗು ಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.