Index   ವಚನ - 31    Search  
 
ಶರಣು ಶರಣಾರ್ಥಿ ಲಿಂಗವೇ ಹೊನ್ನು ಹೆಣ್ಣು ಮಣ್ಣು ಬಿಟ್ಟಾತನೇ ವಿರಕ್ತನೆಂದು ವಿರಕ್ತ ದೇವರೆಂದು ಬಣ್ಣವಿಟ್ಟು ಬಣ್ಣಿಸಿ ಕರೆವರಯ್ಯ. ಆವ ಪರಿ ವಿರಕ್ತನಾದನಯ್ಯ ಗುರುವೇ? ಹೊನ್ನೆಂಬ ರಿಪುವು ಚೋರರ ದೆಸೆಯಿಂದ ಶಿರಚ್ಛೇದನವ ಮಾಡಿಸಿ ನೃಪರಿಂ ಕೊಲಿಸುತಿಪ್ಪುದು. ಹೆಣ್ಣೆಂಬ ರಕ್ಕಸಿ ಲಲ್ಲೆವಾತಿಂದ ಗಂಡನ ಮನವನೊಳಗು ಮಾಡಿಕೊಂಡು ಸಂಸಾರಸುಖಕ್ಕೆ ಸರಿಯಿಲ್ಲವೆನಿಸಿ ಸಿರಿವಂತರಿಗಾಳುಮಾಡಿ ಇರುಳು ಹಗಲೆನ್ನದೆ ತಿರುಗಿಸುತಿಪ್ಪಳು. ಮಣ್ಣೆಂಬ ಮಾಯೆ ತನ್ನಸುವ ಹೀರಿ ಹಿಪ್ಪೆಯ ಮಾಡಿದಲ್ಲದೆ ಮುಂದಣಗುಣವ ಕೊಡದು. ಇವ ಬಿಟ್ಟಾತ ವಿರಕ್ತನೆ? ಅಲ್ಲ. ಕಾಯಕಕ್ಕಾರದೆ ಜೀವಗಳ್ಳನಾಗಿ ಮಂಡೆಯ ಬೋಳಿಸಿಕೊಂಡು ಕಂಡ ಕಂಡವರ ಮನೆಯಲ್ಲಿ ಉಂಡು ಕುಂಡೆಯ ಬೆಳೆಸಿಕೊಂಡಿಪ್ಪಾತ ಆತುಮಸುಖಿಯಯ್ಯ. ಮಾತಿನ ಮಾಲೆಯನಳಿದು ಕಾಯದ ಕಳವಳವನಳಿದು ಲೋಕದ ವ್ಯವಹಾರವ ನೂಂಕಿ ಅಂಬಿಲವ ಅಮೃತಕ್ಕೆ ಸರಿಯೆಂದು ಕಂಡು ಏಕಾಂಗಿಯಾಗಿ ತನುವ ದಂಡಿಸಿ ಗಿರಿಗಹ್ವದಲ್ಲಿದ್ದರೆ ವಿರಕ್ತನೆ? ಅಲ್ಲ. ಅದೇನು ಕಾರಣವೆಂದೊಡೆ ತಾಯಿಯ ಗರ್ಭದಲ್ಲಿ ಶಿಶುವು ಇಕ್ಕಿದ ಕುಕ್ಕುಟಾಸನವ ತೆಗೆಯದು ಶೀತ ಉಷ್ಣವೆನ್ನದು ಉಪಾಧಿಕೆಯನರಿಯದು ಮುಚ್ಚಿದ ಕಣ್ಣು ಮುಗಿದ ಕೈಯಾಗಿ ಉಗ್ರತಪಸ್ಸಿನಲ್ಲಿಪ್ಪುದು. ಅದಕ್ಕೆ ಮುಕ್ತಿಯಾದರೆ ಇವನಿಗೆ ಮುಕ್ತಿಯುಂಟು. ಬರಿಯ ವೈರಾಗ್ಯ ಭವಕ್ಕೆ ಬೀಜವಾಯಿತ್ತು. ಇನ್ನು ನಿಜವಿರಕ್ತಿಯ ಪರಿಯಾವುದೆಂದೊಡೆ ತ್ರಿವಿಧ ಪದಾರ್ಥದಲ್ಲಿ ಮನವಿಲ್ಲದೆ [ಭಕ್ತರ] ಬಣ್ಣದ ನುಡಿಗೆ ಹಣ್ಣಾಗದೆ ಅಂಗಭೋಗವ ನೂಂಕಿ ಲಿಂಗಭೋಗವ ಕೈಕೊಂಡು ಆತ್ಮತೇಜವನಲಂಕರಿಸದೆ ಅಸುವಿಗೆ ಭಿಕ್ಷವ ನೆಲೆಮಾಡಿ ಸದಾಕಾಲದಲ್ಲಿ ಮಂತ್ರಮಾಲೆಯಂ ಮನದಲ್ಲಿ ಕೂಡಿ ಆದಿ ಮಧ್ಯ ಅವಸಾನಮಂ ತಿಳಿದು ನಿರ್ಮಲ ಚಿತ್ತನಾಗಿ ಏಕಾಂತವಾಸಿಯಾಗಿ ನವಚಕ್ರಂಗಳಲ್ಲಿ ನವಬ್ರಹ್ಮಗಳ ಮೂರ್ತಿಗೊಳಿಸಿ ಕಾಯದ ಕಣ್ಣಿಂದ ಕರತಲಾಮಲಕವ ನೋಡುವಂತೆ ಮನದ ಕಣ್ಣಿಂದ ನವಬ್ರಹ್ಮಸ್ವರೂಪವ ಮನದಣಿವಂತೆ ನೋಡಿ ಸುಚಿತ್ತವೇ ಮೊದಲು ನಿರವಯವೆ ಕಡೆಯಾದ ನವಹಸ್ತಂಗಳಿಂದ ಭಾವಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಮನದಣಿವಂತೆ ಸುಚಿತ್ತ ಗುರುವನಪ್ಪಿ ಸುಬುದ್ಧಿ ಲಿಂಗವನಪ್ಪಿ ನಿರಹಂಕಾರ ಜಂಗಮವನಪ್ಪಿ ಸುಮನ ಪ್ರಸಾದವನಪ್ಪಿ ಸುಜ್ಞಾನ ಪಾದೋದಕವನಪ್ಪಿದ ಲಿಂಗಾಂಗಿಯೀಗ ವಿರಕ್ತನು. ಇಂತಪ್ಪ ವಿರಕ್ತಿಯೆಂಬ ಪ್ರಸನ್ನತ್ವ ಪ್ರಸಾದಮಂ ಎನಗೆ ಕರುಣಿಪುದಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.