Index   ವಚನ - 33    Search  
 
ನಿರ್ವಾಣಪದಕ್ಕೆ ಕಾಮಿತನಾಗಿ ಸಕಲ ಪ್ರಪಂಚಿನ ಗರ್ವವಂ ನೆಗ್ಗಲೊತ್ತಿ ಏಕಲಿಂಗ ನಿಷ್ಠಾಪರವಾಗಿ ಆಚರಿಸುವ ಪರಮ ವಿರಕ್ತರ ಉಪಾಧಿಕೆಯಿಲ್ಲದ ಕ್ರೀಗಳಾವುವಯ್ಯ ಎಂದರೆ ತ್ರಿಸಂಧ್ಯಾ ಕಾಲದಲ್ಲಿ ಲಿಂಗಪೂಜೆ ಲಿಂಗೋದಕ ಹಲ್ಲುಕಡ್ಡಿ ಮೊದಲಾದ ಸಕಲ ಪದಾರ್ಥಂಗಳ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಎಚ್ಚರಿಕೆ ತೀರ್ಥಪ್ರಸಾದದಲ್ಲಿ ಅವಧಾನ ಅಚ್ಚ ಲಿಂಗೈಕ್ಯರ ಮನೆಯಲ್ಲಿ ಭಿಕ್ಷ ಕಠಿಣ ಪದಾರ್ಥಂಗಳಂ ಹಿಡಿದರೆ ಹಿಡಿದಂತೆ ಬಿಟ್ಟರೆ ಬಿಟ್ಟಂತೆ ಇಪ್ಪುದು. ತದ್ದಿನವ ಕಳೆದು ಭವಿ ಭಕ್ತಿಯನೊಪ್ಪುಗೊಳ್ಳದೆ ಬಿದ್ದ ಫಲಂಗಳ ಮುಟ್ಟದೆ ರಾತ್ರಿಯ ಕಾಲಕ್ಕೆ ಭಿಕ್ಷ ಬಿಡಾರವೆಂದು ಭಕ್ತರು ಬಿನ್ನಹ ಮಾಡಿದರೆ ಕೈಕೊಂಬುದು ಅಲ್ಲದಿದ್ದರೆ ಹೋಗಲಾಗದು. ಭಕ್ತರು ವಿಭೂತಿ ಮುಂತಾದಿ ಪದಾರ್ಥಕ್ಕೆ ಹೇಳಿದರೆ ಇಚ್ಛೆಯಾದರೆ ಕೈಕೊಂಬುದು ಒಲ್ಲದಿದ್ದರೆ ಬಿಡುವುದು. ಒಪ್ಪಿ ಕೈಕೊಂಡ ಬಳಿಕ ವಿಭೂತಿಯ ಮೀರಲಾಗದು. ವಿಭೂತಿಯ ಕಟ್ಟು ವಿರಕ್ತರಿಗೆ ಇಲ್ಲವೆಂಬುದು ಶರಣಸ್ಥಲಕ್ಕೆ ಸಲ್ಲದು. ಇಂತಿವೆಲ್ಲವು ಗಣಂಗಳು ಒಪ್ಪವಿಟ್ಟ ಆಚರಣೆ. ಈ ಆಚರಣೆಯ ಸಮಾಧಿಯೋಗ ಪರಿಯಂತರ ನಡೆಸುವಾತನೀಗ ನಿರಂಗ ಶರಣ. ಅದಲ್ಲದೆ ಪುರಾತನರ ಗೀತವನೋದಿ ಪುರಾತನರ ಮಕ್ಕಳಾದ ಬಳಿಕ ಕಿರಾತರ ಮಕ್ಕಳಂತೆ ಮನ ಬಂದ ಪರಿಯಲ್ಲಿ ನಡೆಯಲಾಗದು. ಪುರಾತನರಂತೆ ನಡೆವುದು. ಹೀಗಲ್ಲದೆ ಹೊತ್ತಿಗೊಂದು ಬಗೆ ದಿನಕೊಂದು ಪರಿಯಾಗಿ ನಡೆಸುವಲ್ಲಿ ಶರಣನೇನು ಮುಗಿಲಬಣ್ಣದ ಬೊಂಬೆಯೆ? ಶರಣ ಮೊಲನಾಗರೇ? ಶರಣನಿಂದ್ರಚಾಪವೇ? ಶರಣ ಗೋಸುಂಬೆಯೇ? ನೋಡಿರಯ್ಯ ಕಡಿದು ಕಂಡರಿಸಿ ಒಪ್ಪವಿಟ್ಟ ರತ್ನದಪುತ್ಥಳಿಯ ಪ್ರಕಾಶದಂತೆ ನಿಜಗುಂದದಿಪ್ಪುದೀಗ ಶರಣಸ್ಥಲ. ಬಾಲಕನಿಲ್ಲದ ಅಂಗನೆಯ ಮೊಲೆಯಲ್ಲಿ ಹಾಲು ತೊರೆವುದೆ ಅಯ್ಯ? ಶಿವಜ್ಞಾನವಿಲ್ಲದವನ ಮನದಲ್ಲಿ ಕ್ರಿಯವಿಟ್ಟು ನಡೆವ ಆಚರಣೆಯೆಲ್ಲಿಯದೋ ಮುಕ್ತಿಯ ಪಥಕ್ಕೆ ಕ್ರಿಯೆ ಸಾಧನವಲ್ಲದೆ? ಅದು ಹೇಗೆಂದೊಡೆ ಕ್ರೀಯೆಂಬ ಬೀಜದಲ್ಲಿ ಸಮ್ಯಜ್ಞಾನವೆಂಬ ವೃಕ್ಷ ಪಲ್ಲವಿಸಿತ್ತು. ಆ ವೃಕ್ಷ ಭಕ್ತಿಯೆಂಬ ಹೂವಾಯಿತ್ತು. ಆ ಹೂವು ಲಿಂಗನಿಷ್ಠೆಯೆಂಬ ಹಣ್ಣಾಯಿತ್ತು. ಆ ಹಣ್ಣಿನ ಅಮೃತಸಾರಮಂ ನಾನು ದಣಿಯಲುಂಡು ಬಸವಾದಿ ಪ್ರಮಥರ ಪಡುಗ ಪಾದರಕ್ಷೆಯಂ ಹಿಡಿವುದಕ್ಕೆ ಯೋಗ್ಯನಾದೆನಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.