Index   ವಚನ - 34    Search  
 
ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ. ಜನನ ಮರಣಕಂಜಿ ತಾನಾರೆಂಬುದಂ ಸ್ವಾನುಭಾವದಿಂ ನೋಡಿ ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು ಬಂಧುವರ್ಗಮಂ ಭಂಗಿಸಿ ಉಪಾಧಿಕೆಯನುರುಹಿ ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು ಮಮಕಾರಂಗಳಂ ಮುಂದುಗೆಡಿಸಿ ಲೋಕದ ನಚ್ಚುಮಚ್ಚಿಗೆ ಕಿಚ್ಚುಗುತ್ತಿ ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ ಮರಹ ಮಗ್ಗಿಸಿ ಮನ ತನುವನಪ್ಪಿ ಸರ್ವ ಕರಣಂಗಳಂ ಚರಲಿಂಗ ಮುಖವ ಮಾಡಿ ಆತ್ಮವಿದ್ಯಾಲಿಂಗದಲ್ಲಿ ಮನಸಂದು ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ ಆರೆರಡು ಪ್ರಕಾರದ ನಾದಂಗಳಂ ಕೇಳಿ ಹರುಷಂ ಹರವರಿಗೊಂಡು ಎನಗೆ ಶಿವತತ್ವ ಸಾಧ್ಯವಾಯಿತು. ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ ಕ್ರೀಯಂ ಬಿಟ್ಟು ಗಂಭೀರ ಜ್ಞಾನದೊಳಿರುವ ಶರಣಂಗೆ ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ ಶಿವನಲ್ಲಿ ನಿಜೈಕ್ಯವಿಲ್ಲ.ಅದೇನು ಕಾರಣವೆಂದೊಡೆ ಷಟ್ಸ್ಥಲಬ್ರಹ್ಮಿಯೆನಿಸಿಕೊಂಡು ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ ಎರಡೊಂದುಸ್ಥಲ ಒಂದಾದ ಸ್ಥಲದಲ್ಲಿ ಶರಣಲಿಂಗವೆಂಬುಭಯವಳಿದು ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ ಸಿದ್ಧಪ್ರಸಾದವೆಂಬ ನಿಷ್ಕಲ ಬ್ರಹ್ಮದಲ್ಲಿ ಉರಿ ಕರ್ಪೂರದಂತೆ ಬೆಳಗುದೋರಿ ಶುದ್ಧಪ್ರಸಾದವನಂಗಂಗೊಂಡು ನಿರಂಜನ ಪ್ರಸಾದವನೊಡಗೂಡಿದ ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ ಶಿವಲಿಂಗಪೂಜೆಯಂ ಬಿಟ್ಟ[ರೆ]? ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]? ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]? ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]? ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]? ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]? ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ ಅವನ ಕರ್ಮಾದಿಕರ್ಮಂಗಳಂ ಸುಟ್ಟು ಅವನ ರಕ್ಷಿಪುದಂ ಬಿಟ್ಟ[ರೆ]? ಇಂತಿವೆಲ್ಲವು ಕ್ರೀಯೋಗಗಳು. `ಕ್ರಿಯಾದ್ವೆೈತಂ ನ ಕರ್ತವ್ಯಂ ಜ್ಞಾನಾದ್ವೆೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||' ಇಂತೆಂದುದಾಗಿ ಇದುಕಾರಣ ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ ನಿಜಮುಕ್ತಿಯಲ್ಲದೆ ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು ಸಾಯುಜ್ಯಪದಸ್ಥಲನಪ್ಪನಲ್ಲದೆ ಹರನಲ್ಲಿ ಸಮರಸವಿಲ್ಲವೆಂದೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.