ನಿಜಗುಣ ಚೆಂದಿಮರಸರು ಕರಸ್ಥಲದ ನಾಗಿದೇವರೊಳಗಾದ
ಎಲ್ಲಾ ವಿರಕ್ತರು ಆವ ಕ್ರಿಯೆಯಲ್ಲಿ ಆಚರಿಸಿ ಲಿಂಗೈಕ್ಯರಾದರೆಂದು
ಕೆಟ್ಟು ನುಡಿವ ಭವಹೇತುಗಳು ನೀವು ಕೇಳಿರೆ
ಅವರು ತುಂಬಿದ ತೊರೆಯ ಸಂಭ್ರಮದಿಂದ ಹಾಯ್ದರು.
ಶಕ್ತಿಯ ಮುಂದೆ ಹಾಲು ಬೋನ ಹಣ್ಣು ಕಜ್ಜಾಯವಿಕ್ಕಿರಲು
ಆ ಶಕ್ತಿಯ ಮಾತನಾಡಿಸಿ ಉಂಡರು.
ವಿಷವ ಪದಾರ್ಥವೆಂದು ಕೊಡಲು ಉಂಡು ದಕ್ಕಿಸಿಕೊಂಡರು.
ಭಿಕ್ಷಕ್ಕೆ ಹೋದಲ್ಲಿ ಕಾಮುಕ ಸ್ತ್ರೀ ಬಂದು ಹಿಡಿದಡೆ
ಅವರಂಗಳದಲ್ಲಿ ಅವಳ ಅನುಭವಿಸುವಾಗ
ಆ ಸಮಯದಲ್ಲಿ ಮನೆಯೊಡೆಯ ಬಂದು ಕಡಿದರೆ
ಖಂಡೆಯದ ಮೊನೆಗೆ ಬಯಲಾಗಿ ತೋರಿದರು.
ಪಚ್ಚೆಯ ಕಡಗಮಂ ತಿರುಗಣಿಯ ಮಡುವಿಗಿಟ್ಟು
ತಿರುಗಿ ಕರೆದುಕೊಂಡರು.
ಕೆಂದೆಂಗಿನ ಎಳನೀರ ಭಾವಾರ್ಪಣವ ಮಾಡಿದರು.
ಪಟ್ಟದರಸಿನ ರಾಣಿಯು ಪಲ್ಲಕ್ಕಿಯ ಮೇಲೆ ಹೋಗುವಲ್ಲಿ
ಅವಳ ಬಟ್ಟಮೊಲೆವಿಡಿದು ಮುದ್ದಾಡಿ
ಇರಿಸಿಕೊಂಡು ಬಯಲಾದರು.
ದೇವೇಂದ್ರಭೋಗಮಂ ಬಿಟ್ಟರು.
ತನು ನಿಲಿಸಿ ಪ್ರಾಣವ ಕೊಂಡೊಯ್ದರು.
ಉಂಗುಷ್ಠದಲ್ಲಿ ಧರಿಸಿದ್ದ ಲಿಂಗಮಂ ತೆಗೆಯಲು
ಆ ಲಿಂಗದ ಕೂಡೆ ಪ್ರಾಣವ ಕಳುಹಿದರು.
ಮಿಡಿವಿಲ್ಲಿನೊಳಗೆ ಲಿಂಗವನೆಚ್ಚು
ಆ ಲಿಂಗದೊಡನೆ ನಿರವಯಲಾದರು.
ಉಪಾಧಿಕೆಯೊಡಲಾಸೆಯ ಸುಟ್ಟರು.
ಚಳಿ ಮಳೆಯೆನ್ನದೆ ಅರಣ್ಯದಲ್ಲಿದ್ದರು.
ಹಸಿದರೆ ಕೆಸರ ಮೆದ್ದರು.
ಅವರು ಲಿಂಗಾಂಗರೂಢರಾಗಿ ಲಿಂಗದಲೈಕ್ಯರಾದರು.
ನೀವು ಅವರಂತೆ ಲಿಂಗಾಂಗವ ತೋರಬೇಕು.
ಅದಿಲ್ಲದಿದ್ದರೆ ಜ್ಞಾನಕ್ರಿಯಗಳಿಂದಿರಬೇಕು.
ಅದಿಲ್ಲದಿದ್ದರೆ ಸುಮ್ಮನಿದ್ದು ಶಿವಶರಣರ
ಮನಸಿಂಗೆ ಬರಬೇಕು.ಹೀಗಲ್ಲದೆ
ಹೊಟ್ಟೆಯಕಿಚ್ಚಿನ ಬಾಯಿ ಬಡಕುತನವೇತಕಯ್ಯ ನಿಮಗೆ?
ಆನೆ ಮದವೆದ್ದು ಸೋಮವೀಥಿಯ ಸೂರೆಮಾಡಿತೆಂದು
ಆಡು ಮದವೆದ್ದು ಬೇಡಗೇರಿಗೆ ಹೋಗಿ ಕೊರಳ ಮುರಿಸಿಕೊಂಬಂತೆ
ಅಂದಿನ ಕಾಲದ ಹನುಮ ಲಂಕೆಯ ದಾಂಟಿದನೆಂದು
ಇಂದಿನ ಕಾಲದ ಕಪಿ ಹಳ್ಳವ ದಾಂಟಿದಂತೆ
ಅರ್ತಿಯಿಂದ ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರಿದಂತೆ ರಾಜಕುಮಾರ ತೇಜಿಯನೇರಿದನೆಂದು
ರಜಕನ ಕುವರ ಕುನ್ನಿಯನೇರಿದಂತೆ
ಬಲಮುರಿಯ ಶಂಖ ಧಿಗಿಲು ಭುಗಿಲೆಂದು ಝಂಕರಿಸಿತೆಂದು
ಕೆರೆಯೊಳಗಣ ಗುಳ್ಳೆ ಕೀಚು ಕೀಚೆಂದಂತೆ
ತಮ್ಮಿರವ ತಾವರಿಯದೆ
ಬಾಳುವ ಕಾಲದಲ್ಲಿ ಮರಣದ ಮದ್ದಕೊಂಬ
ಈ ಖೂಳ ಮಾನವರ ಎನಗೊಮ್ಮೆ ತೋರದಿರಯ್ಯ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.