ಅಂಗದ ಮೇಲಕ್ಕೆ ಬಂದ ಆಚಾರಲಿಂಗದ
ಹೊಲಬನರಿಯದೆ ಕೈಲಾಸದ ಮೇಲಿಪ್ಪ
ಬಾಲಕೋಟಿ ಸೂರ್ಯಪ್ರಕಾಶವನುಳ್ಳ ಶಿವನನೊಲಿಸಬೇಕೆಂದು
ಒಂದು ವಸ್ತುವ ಎರಡಿಟ್ಟು ನುಡಿವ
ಮಂದಮತಿಗಳು ನೀವು ಕೇಳಿರೇ
ಮಹಾಮೇರುಪರ್ವತವೇ ಶರಣ.
ಆ ಶರಣನ ಸ್ಥೂಲತನುವೇ ರಜತಾದ್ರಿ.
ಸೂಕ್ಷ್ಮತನುವೇ ಹೇಮಾದ್ರಿ.
ಕಾರಣತನುವೇ ಮಂದರಾದ್ರಿ.
ಈ ಮೂರುಪರ್ವತಂಗಳ ಅರಮನೆಗಳಲ್ಲಿ ನೆಲಸಿಪ್ಪ
ಶಿವನಾರೆಂದರೆ ನಿರಾಕಾರ ಶೂನ್ಯಬ್ರಹ್ಮವೇ
ಶರಣನ ಕುರಿತು ಪಂಚಸಾದಾಖ್ಯಂಗಳನೊಳಕೊಂಡು
ಸಾಕಾರವಾಗಿ ಬಂದ ಇಷ್ಟಲಿಂಗವೇ[ಆ] ಶಿವನು.
ಗ್ರಂಥ: 'ಜ್ವಲತ್ ಕಾಲಾನಲಾಭಾಸಾ ತಟಿತ್ ಕೋಟಿ ಸಮಪ್ರಭಾ|
ತಸ್ಯೋರ್ಧ್ವಾ ಚ ಶಿಖಾ ಸೂಕ್ಷ್ಮ ಚಿದ್ರೂಪಾ ಪರಮಾ ಕಲಾ|
ಏವಂ ವೇದ ಕಲಾ ದೇವಿ ಸದ್ಗುರೋಶ್ಯಿಷ್ಯಮಸ್ತಕೇ
ಹಸ್ತಾಬ್ಜಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ
ವಪುರೇವಂ ಸಮುತ್ಪನ್ನಂ ತತ್ ಪ್ರಾಣಂ ಮಿಶ್ರಿತಂ ಭವೇತ್
ಯಥಾ ಗುರುಕರೇ ಜಾತಾ ಲಿಂಗ ಭಕ್ತಿರ್ದ್ವಿಭೇದಕಾ'
ಇಂತೆಂದುದಾಗಿ ಆ ನಿರಾಕಾರಬ್ರಹ್ಮನೇ ಶಿವನು.
ಆ ಶಿವನ ಧರಿಸಿಪ್ಪ ಶರಣನ ಕಾಯವೇ ಕೈಲಾಸ.
ಇದಲ್ಲದೆ ಮತ್ತೊಂದು ಕೈಲಾಸ
ಬೇರೊಬ್ಬ ಶಿವನುಂಟೆಂದು ಭ್ರಮೆಗೊಂಡು
ಮನವನೆರಡುಮಾಡಿಕೊಂಬುದು ಅಜ್ಞಾನ ನೋಡಾ.
ಉರದ ಮಧ್ಯದಲ್ಲಿ ಒರಗಿಪ್ಪ ಗಂಡನಂ ಬಿಟ್ಟು
ಇನ್ನು ನೆರೆಮನೆಯ ಗಂಡರಿಗೆ ಮನವನಿಕ್ಕುವ
ಹಾದರಗಿತ್ತಿಗೆ ಪತಿಭಕ್ತಿಯೆಲ್ಲಿಯದೋ?
ಶ್ರೀಗುರು ಕರುಣಿಸಿಕೊಟ್ಟ ಕ್ರಿಯಾಲಿಂಗವನು
ಅರ್ಚನೆ ಪೂಜನೆಯಿಂದ ಅರ್ಪಿತಾವಧಾನದಿಂದ
ಧ್ಯಾನ ಧಾರಣದಿಂದ ಸಮತೆ ಸಮಾಧಾನದಿಂದ
ಧ್ಯಾನ ಮೌನ ಉಪಾವಸ್ಥೆಯಿಂದ
ಮುನಿಸು ಮೂದಲೆಯಿಂದ ಕಾಮಿಸಿ ಕಂಬನಿದುಂಬಿ
ಕರಸ್ಥಲದಲಿಪ್ಪ ಪ್ರಾಣೇಶ್ವರನ ಶ್ರೀ ಚರಣಕ್ಕೆ
ಲಲಾಟ ಪೂಜೆಯಂ ಮಾಡಿ
ಒಲಿಸಿ ಒಡಗೂಡಿ ನಿಜಮುಕ್ತಿವಡೆಯದೆ
ಆಕಾರವಂ ಮರೆದು ನಿರಾಕಾರವಂ ಕೂಡಿಹೆನೆಂಬ
ಲೋಕದ ಕಾಕುಮಾನವರೆಲ್ಲಾ ಕಾಲ ಕಾಮರಿಗೆ ತುತ್ತಾಗಿ
ಕಾಲಾಗ್ನಿರುದ್ರನ ಹೊಡೆಗಿಚ್ಚಿಗೊಳಗಾದರಯ್ಯ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Aṅgada mēlakke banda ācāraliṅgada holabanariyade
kailāsada mēlippa
bālakōṭisūryaprakāśavanuḷḷa śivananolisabēkendu
ondu vastuva eraḍiṭṭu nuḍiva mandamatigaḷu nīvu kēḷirē
mahāmēruparvatavē śaraṇa.
Ā śaraṇana sthūlatanuvē rajatādri.
Sūkṣmatanuvē hēmādri.
Kāraṇatanuvē mandarādri.
Ī mūruparvataṅgaḷa aramanegaḷalli nelasippa
śivanārendare nirākāra śūn'yabrahmavē
śaraṇana kuritu pan̄casādākhyaṅgaḷanoḷakoṇḍu
sākāravāgi banda iṣṭaliṅgavē[ā] śivanu.
Grantha: 'Jvalat kālānalābhāsā taṭit kōṭi samaprabhā|
tasyōdhrvā ca śikhā sūkṣma cidrūpā paramā kalā|
ēvaṁ vēda kalā dēvi sadgurōśyiṣyamastakē
hastābjamathanād grāhyā tasya bhāva karōditā
vapurēvaṁ samutpannaṁ tat prāṇaṁ miśritaṁ bhavēt
yathā gurukarē jātā liṅga bhaktirdvibhēdakā'
intendudāgi ā nirākārabrahmanē śivanu.
Ā śivana dharisippa śaraṇana kāyavē kailāsa.
Idallade mattondu kailāsa
bērobba śivanuṇṭendu bhramegoṇḍu
manavaneraḍu māḍikombudu ajñāna nōḍā.
Urada madhyadalli oragippa gaṇḍanaṁ biṭṭu
innu neremaneya gaṇḍarige manavanikkuva
hādaragittige patibhaktiyelliyadō?
Śrīguru karuṇisikoṭṭa kriyāliṅgavanu
arcane pūjaneyinda arpitāvadhānadinda
dhyāna dhāraṇadinda samate samādhānadinda
dhyāna mauna upāvastheyinda
munisu mūdaleyinda kāmisi kambanidumbi
karasthaladalippa prāṇēśvarana śrī caraṇakke
lalāṭa pūjeya māḍi
olisi oḍagūḍi nijamuktivaḍeyade
ākāravaṁ maredu nirākāravaṁ kūḍ'̔ihenemba
lōkada kākumānavarellā kāla kāmarige tuttāgi
kālāgnirudrana hoḍegiccigoḷagādarayyā,
ghanaliṅgiya mōhada cennamallikārjuna.