Index   ವಚನ - 38    Search  
 
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ ಮರುಳುಮಾನವರ ಬಗೆಯ ನೋಡಯ್ಯ ಮನವೇ. ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು ತೆಂಗ ಪೋಟಾಡುವಂತೆ ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ ಮನೆಮನೆಗೆ ಹೋಗಿ ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ ವೇಷಮಂ ಹಲ್ಲುಣಿಸಿಕೊಂಡು ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು ಹೂಸಕದುಪಚಾರಮಂ ನುಡಿದು ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ ನಚ್ಚು ಮಚ್ಚ ನುಡಿದು ಉಂಡುಕೊಂಡು ದಿನಕಾಲಮಂ ನೂಂಕಿ ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ ಭವಿ ಭಕ್ತರೆನ್ನದೆ ಉಂಡುಟ್ಟಾಡಿ ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ ನಡೆಯಿಲ್ಲದ ನಡೆಯ ನಡೆದು ನುಡಿಯಿಲ್ಲದ ನುಡಿಯ ನುಡಿದು ತನ್ನ ಕಪಟವನರಿಯದೆ ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ ಹಸಿಯ ಮಾದಿಗರಂತೆ ಹುಸಿಯ ನುಡಿದು ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.