Index   ವಚನ - 48    Search  
 
ಕತ್ತಲೆ ಸತ್ತು ಬೆಳಗು ಬೀದಿವರಿಯಿತ್ತು ನೋಡಾ ಎಲೆ ಅಮ್ಮಾ. ಪಂಚತತ್ವಂಗಳ ಮೇಲಿಪ್ಪ ಆಚಾರಲಿಂಗದ ನಿಷ್ಠೆಯ ಬಲದಿಂದ ಆ ಖಂಡಿತ ಕರಣಂಗಳನೊಳಕೊಂಡಿಪ್ಪ ಈಷಣತ್ರಯಂಗಳ ಬೀಯವನಿಕ್ಕಿ ತ್ಯಾಗಾಂಗಿಯಾದೆ. ಹದಿನೇಳುತತ್ವಂಗಳ ಮೇಲಿಪ್ಪ ಜಂಗಮಲಿಂಗದ ಎಚ್ಚರಿನ ಬಲದಿಂದ ಅನಂತ ಸವಿಯನೊಳಕೊಂಡಿಪ್ಪ ಷಡುರಸಾನ್ನಂಗಳಲಿ ಲಿಂಗಭೋಗೋಪಭೋಗಿಯಾಗಿ ಭೋಗಾಂಗಿಯಾದೆ. ಮೂರುತತ್ವಂಗಳ ಮೇಲಿಪ್ಪ ನಿರಾಕಾರಲಿಂಗದ ಅರುಹಿನ ಬಲದಿಂದ ಪ್ರಣವ ಪಂಚಾಕ್ಷರಿಯ ಸ್ಮರಿಸಿ ಮನ ಮಹಾಲಿಂಗದಲ್ಲಿ ಯೋಗವಾಗಿ ಯೋಗಾಂಗಿಯಾಗಿ ಚಿದ್ಪ್ರಹ್ಮಾಂಡದೊಳಗಣ ಏಳುತಾವರೆಯ ಮೇಲಿಪ್ಪ ನಿಷ್ಕಲ ಚಿದ್ವಿಂದುಲಿಂಗಕ್ಕೆ ಪ್ರಾಣಪೂಜೆಯಂ ಮಾಡೆ ಮಹಾಜ್ಞಾನಬಲದಿಂದ ನವದ್ವೀಪಗಳ ಲಿಂಗಂಗಳ ಬೆಳಗು ಪಿಂಡಾಂಡದಲ್ಲಿ ಪ್ರಭಾವಿಸಿ ತೋರುತಿರ್ಪುದಾಗಿ ನಾನು ಸರ್ವಾಂಗಲಿಂಗಿಯಾದೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.