Index   ವಚನ - 50    Search  
 
ಮೂರೈದುತನುವಿಡಿದ ನರಗುರಿಗಳೆಲ್ಲಾ ಭಕ್ತರಪ್ಪರೆ? ಅಲ್ಲಲ್ಲ. ನಮ್ಮ ಶಿವಭಕ್ತರ್ಗೆ ಸದ್ಗೋಷ್ಠಿ ಸದಾಚಾರಂಗಳೇ ಪಾದಂಗಳು. ಗುರುವೇ ಸ್ಥೂಲತನು. ಲಿಂಗವೇ ಸೂಕ್ಷ್ಮತನು. ಜಂಗಮವೇ ಕಾರಣತನು. ಸಮ್ಯಜ್ಞಾನವೇ ಪ್ರಾಣ. ತೀರ್ಥ ಪ್ರಸಾದವೇ ನೇತ್ರಂಗಳು. ಇಂತಪ್ಪ ತನುವಿಡಿದು ತಾವು ತಮ್ಮ ಊರಿಗೆ ಹೋಗುವಂತೆ ಮುಕ್ತಿಪುರಕ್ಕೆ ಹೋಗಿ ನೊಸಲಕಣ್ಣು ಪಂಚಮುಖ ದಶಭುಜದ ಉಮಾವಲ್ಲಭನಾದ ಪರಶಿವನ ಓಲಗದಲ್ಲಿ ಗಣಂಗಳ ಮಧ್ಯದಲ್ಲಿ ಓಲಾಡುತ್ತಿಪ್ಪರಯ್ಯ ನಮ್ಮವರು. ಇಂತಪ್ಪ ತನುವಿಡಿಯದ ಅಜ್ಞಾನಿಗಳು ಕಿರುಬಟ್ಟೆಯಲ್ಲಿ ಹರಿದು ಕಂಗೆಟ್ಟು ಕಾಡ ಹೊಕ್ಕು ಕಣ್ಣು ಕಾಣದೆ ಕಮರಿಯ ಬಿದ್ದು ಬಳಲುತ್ತಿಪ್ಪರಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.