Index   ವಚನ - 51    Search  
 
ಸದಮಲಭಕ್ತಿಯಿಂದ ಭಕ್ತನು ನಮಸ್ಕರಿಸಿ ಎನ್ನ ಕೈವಿಡಿದು ತನ್ನ ಮಠಕ್ಕೆ ಕರೆದೊಯ್ದು ತಾನು ಪಟ್ಟಗದ್ದುಗೆಯ ಮೇಲೆ ಕುಳಿತು ಚಿನ್ನದ ಪರಿಯಾಣದಲ್ಲಿ ಪಂಚಾಮೃತವನುಣ್ಣುತ ಎನ್ನ ಕದವಿನ ಮರೆಯಲ್ಲಿ ಕುಳ್ಳಿರಿಸಿ ಒಡೆದ ಓಡಿನಲ್ಲಿ ಅಂಬಲಿಯನೆರೆಯಲು ಎಲೆ ದೇವ ಎನ್ನ ಮನದಲ್ಲಿ ನೊಂದೆನಾದೊಡೆ ನಾನು ಕರಪಾತ್ರನಲ್ಲ ಅಪಾತ್ರನು. ಅದೇನು ಕಾರಣವೆಂದೊಡೆ ನಾನು ಮೂರಾರುತಿಂಗಳು ಜನನಿಯ ಜಠರವೆಂಬ ಸೆರೆಮನೆಯಲ್ಲಿ ಸಿಕ್ಕಿರುವಾಗ ಎನಗೆ ಸದಾಕಾಲ ಉಣಲಿಟ್ಟು ಸಲಹಿದವ ನೀನೋ? ಅವನೋ? ಆ ಸೆರೆಮನೆಯಿಂದ ಎನ್ನ ಕೈವಿಡಿದು ಕರೆತಂದು ಶಿವಲಾಂಛನಮಂ ಕರುಣದಿಂದಿತ್ತು ಮರ್ತ್ಯಲೋಕದಲ್ಲಿ ಎನ್ನಂ ಪೂಜ್ಯನ ಮಾಡಿದಾತ ನೀನೋ? ಅವನೋ? ಇದು ಕಾರಣ ಇಕ್ಕುವಾತ ಅವನೆಂಬುದು ಎನ್ನಲಿಲ್ಲ. ಎಚ್ಚವನಿದ್ದಂತೆ ಅಂಬಿಗೆ ಮುನಿವರೇ ಅಯ್ಯ? ನಾನು ಉಂಡುಟ್ಟು ಸುಖಿಯಾದರೆ ನಿನ್ನ ಹಾಡುವೆ. ನಾನು ಹಸಿದು ನೊಂದೆನಾದರೆ ನಿನ್ನಂ ಬೈವೆನಲ್ಲದೆ ಮಾನವರ ಹಂಗು ಎನಗೇತಕಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.