Index   ವಚನ - 56    Search  
 
ತೊಟ್ಟುಬಿಟ್ಟ ಹಣ್ಣಾಗಿ ಎನಗೆ ನಿಜೈಕ್ಯದ ಬಟ್ಟೆ ನಿರುತವಾಯಿತಯ್ಯ. ಪರಿಭವಕ್ಕೆ ತರುವ ಪಂಚಭೂತಂಗಳೆಂಬ ವಾರಕವ ಪಂಚಬ್ರಹ್ಮಕ್ಕೊಪ್ಪಿಸಿದೆ. ಅಗಣಿತ ಕರಣಂಗಳನೊಳಕೊಂಡು ಸುಖವೊಂದು ದುಃಖಹದಿನಾರಕ್ಕೊಳಗು ಮಾಡುವ ಆತ್ಮನೆಂಬ ವಾರಕವ ಪರಬ್ರಹ್ಮಕ್ಕೊಪ್ಪಿಸಿದೆ. ಉತ್ಪತ್ತಿ ಸ್ಥಿತಿ ಪ್ರಳಯವೆಂಬ ವಾರಕವ ಮೂದೇವರಿಗೊಪ್ಪಿಸಿದೆ. ಇಂತಪ್ಪ ಋಣಂಗಳ ತಿದ್ದಿ ಸಿರಿವಂತನಾಗಿ ಭವರಾಜನ ಬಲವ ಗೆದ್ದೆ. ಭೂತಳದ ಭೋಗವ ನಚ್ಚು ಮುಚ್ಚೆಂಬ ಕೋಳಮಂ ಕಳೆದೆ. ಹೊಕ್ಕು ಹೊರಡುವ ತ್ರಿಭುವನವೆಂಬ ತ್ರಿಪುರಮಂ ಸುಟ್ಟು ಸಂಸಾರವೆಂಬ ಸಪ್ತಸಮುದ್ರಂಗಳಂ ದಾಂಟಿದೆ. ಉನ್ಮನಿಯಪುರದ ಬಚ್ಚಬರಿಯ ಬೆಳಗಿನ ಬಯಲಬ್ರಹ್ಮವ ಮರೆಹೊಕ್ಕೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.