Index   ವಚನ - 58    Search  
 
ಕನ್ನವನ್ನಿಕ್ಕಿ ಚಿನ್ನವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಹಾದರವಮಾಡಿ ಹಾಗವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಗಾಣವ ಹಾಕಿ ಮೀನ ಹಿಡಿದು ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಇಂತಿವರೆಲ್ಲರು ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ ಸದಾಚಾರಕ್ಕೊಳಗಾಗಿ ಮುಕ್ತಿವಡೆದರು. ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ ವ್ರತನೇಮಗಳ ಹಿಡಿದು ಬಿಟ್ಟವಂಗೆ ಮುಂದು ಹಿಂದಾಯಿತು, ಆತ ವ್ರತಗೇಡಿ. ಅದು ಹೇಗೆಂದೊಡೆ ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ ಕರ್ಮತ್ರಯಂಗಳು ಬೆನ್ನ ಬಿಡವೆಂದು ಶರಣರ ವಚನಂಗಳು ಸಾರುತ್ತಿವೆ. ಗ್ರಂಥ: 'ಸ್ಥಾವರಂ ಭಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ| ಉಭಯೋರ್ಭಿನ್ನಭಾವೇನ ನಾರ್ಚನಂ ನ ಚ ವಂದನಂ||' ಇಂತೆಂದುದಾಗಿ ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ? ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ? ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ? ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ. ಉರಿ ಕರ್ಪೂರವ ಹಿಡಿದಂತೆ ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ ಶರಣಸ್ಥಲದ ಮತವಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.