Index   ವಚನ - 59    Search  
 
ಸಾಧು ಗುಣಕ್ಕೆ ಸಲೆ ಸಂದ ವಾರಣ ಬಂದು ಹುಟ್ಟು ಕಂಗಳರ ಸಭಾಮಧ್ಯದಲ್ಲಿ ನಿಲ್ಲಲು ಕೆಲದೊಳಿಪ್ಪ ಕಣ್ಣುಳ್ಳಾತ ಆನೆ ಬಂದಿತೆಂದು ನುಡಿಯಲೊಡನೆ ಅತಿ ಪ್ರೇಮದಿಂದ ಕಂಗಳರು ಆ ಆನೆಯ ಅವಯವಂಗಳಂ ಮುಟ್ಟಿ ನೋಡಿ ಆನೆ ಕೊಳಗದಾಕಾರವೆಂದು ಕಾಲ ಮುಟ್ಟಿದಾತ ಆನೆ ಒನಕೆಯಾಕಾರವೆಂದು ಸೊಂಡಿಲ ಮುಟ್ಟಿದಾತ ಆನೆ ಹರವಿಯಾಕಾರವೆಂದು ಕುಂಭಸ್ಥಲವ ಮುಟ್ಟಿದಾತ ಆನೆ ಮೊರದಾಕಾರವೆಂದು ಕಿವಿಯ ಮುಟ್ಟಿದಾತ ಆನೆ ರಜಪೂರಿಗೆಯಾಕಾರವೆಂದು ಬಾಲವ ಮುಟ್ಟಿದಾತ ಇಂತಿವರೆಲ್ಲರೂ ಆನೆಯ ನೆಲೆಯನರಿಯದೆ ತಮ್ಮೊಳಗೆ ತಾವು ಕೊಂಡಾಡುತ್ತಿಪ್ಪರು. ಆನೆಯ ನೆಲೆಯ ಆನೆಯನೇರುವ ಪಟ್ಟದರಸು ಬಲ್ಲನಲ್ಲದೆ ಹುಟ್ಟು ಕುರುಡರದೇನು ಬಲ್ಲರಯ್ಯ? ಈ ಪ್ರಕಾರದಲ್ಲಿಪ್ಪ ಪಶುಪ್ರಾಣಿಗಳು ನಿಜೈಕ್ಯರ ಆಚರಣೆಯನರಿಯದೆ ಮೂಗಿನಾಭರಣವ ಮೂಗಿಗಿಕ್ಕುವಂತೆ ನುಡಿದು ನಡೆಯ ತಪ್ಪುವರು. ಅದು ಶಿವಜ್ಞಾನಿಗಳ ಮತವಲ್ಲ. ಅದು ಹೇಗೆಂದೊಡೆ ಪ್ರತ್ಯಕ್ಷ ಜ್ಞಾನವ ಪ್ರಮಾಣಿಸಿ ಅಪರೋಕ್ಷ ಜ್ಞಾನವನಾಲೋಚಿಸಿ ಸಹಜಜ್ಞಾನವ ಸಂಪಾದಿಸಿ ಈ ಜ್ಞಾನತ್ರಯವನೊಂದುಮಾಡಿ ಬಿಡುವ ಹಿಡಿವ ಆಚರಣೆಯಂ ನೆಲೆಗೊಳಿಸಿಕೊಂಡು ಹಿಡಿದಾಚರಣೆಯಲ್ಲಿ ಪರಾಕ್ರಮಿಯಾಗಿ ಆದಿ ಅನಾದಿಯ ಮೇಲಣ ಜ್ಯೋತಿರ್ಮಯವಪ್ಪ ಶೂನ್ಯಲಿಂಗಮಂ ಬೆರಸಿ ಭಿನ್ನವಿಲ್ಲದಿರ್ಪ ಆಚರಣೆಯ ವೀರಮಾಹೇಶ್ವರ ಬಲ್ಲನಲ್ಲದೆ ಅಜ್ಞಾನಿ ಬಾಯಿಬಡಿಕರವರೆತ್ತ ಬಲ್ಲರಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.