Index   ವಚನ - 26    Search  
 
ಪ್ರಥಮ ಗುರು ಕಾಣಲಿಕೆಯಾಗಿ ಕರ್ಮಂಗಳು ಬೆದರಿ ಬೆಚ್ಚಿದವು: ಹುಸಿ ಆಸೆಯಾಮಿಷ ತಾಮಸ ಕುಟಿಲಂಗಳು ತಮಗೆ ತಮ ನಿಂದಿರೆ ಠಾವಿಲ್ಲೆನುತಿದ್ದವು. ಸದ್ಗುರು ಕಾರುಣ್ಯ ಹಸ್ತಮಸ್ತಕ ಸಂಯೋಗದಲ್ಲಿ ಪೂರ್ವಗುಣವಳಿದು ಪುನರ್ಜಾತನಾಗಿ, ಕರಣಾದಿಗಳ ಗುಣಂಗಳ ಕಳೆದು ಶಿವಲಿಂಗದಲ್ಲಿ ಉಳಿದು, ಅನುಪಮ ಸುಖಸಾರಾಯ ಶರಣನೆನಿಸಿ[ದ] ಕಾರಣ. ಇದನರಿದು ಲಿಂಗದಲ್ಲಿ ತದುಗತನಾಗಿದ್ದನು. ಜಂಗಮದಲ್ಲಿ ಕರುಣವ ಪಡೆದು ಭವಿಯನೊಲ್ಲೆನೆಂದು ಬೇರೆ ನಿಂದ ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನೆನ್ನ ಭವಕಲ್ಪಿತವ ಕಳೆದ.