ಜಗದ ಕರ್ತನು ಜಗದ ಸ್ಥಿತಿ ಗತಿಯ
ನಡೆಸುವ ಪರಿಯನು
ಆರಿಗೆಯೂ ಅರಿಯಬಾರದು.
ಅಕಟಕಟಾ! ದೇವದಾನವ ಮಾನವರೆಲ್ಲರೂ
ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ.
ಆ ಮಹಾಕರ್ತನು ತನ್ನ ಶಕ್ತಿಯ
ವಿನೋದಕ್ಕೆ ರಚಿಸಿದ ರಚನೆ:
ಮೂವರು ಪ್ರಧಾನರು, ಒಂಬತ್ತು ಪ್ರಜೆ ಪಸಾಯತರು,
ಪದಿನಾಲ್ಕು ನಿಯೋಗಿಗಳು, ಇಪ್ಪತ್ತೇಳು ಅನುಚರರು,
ಅಷ್ಟತನುಗಳಿಂದಾದ ಜಗದಸ್ಥಿತಿಯ ನಡೆಸುವರು.
ಆ ಮಹಾಕರ್ತನು ಕಟ್ಟಿದ ಕಟ್ಟಳೆಯಲು,
ಆಯುಷ್ಯದಲ್ಲಿ ನಿಮಿಷ ಮಾತ್ರ ಹೆಚ್ಚಿಸ ಬಾರದು,
ಕುಂದಿಸಬಾರದು ನೋಡಾ.
ಭಾಷೆಯಲ್ಲಿ ಅಣು ಮಾತ್ರ ಹೆಚ್ಚಿಸಬಾರದು,
ಕುಂದಿಸಬಾರದು ನೋಡಾ.
ಇದನಾವಂಗೆಯೂ ಅರಿಯಬಾರದು.
ಇದ ಬಲ್ಲರೆ ಎಮ್ಮ ಶರಣರೆ ಬಲ್ಲರು.
ಕೂಡಲಚೆನ್ನಸಂಗಮದೇವಾ!