Index   ವಚನ - 198    Search  
 
ಸರ್ವಗತಶಿವನೆಂಬುದೀ ಲೋಕವೆಲ್ಲಾ. ಶಿವಶಿವಾ ನಿರ್ಬುದ್ಧಿ ಜನಂಗಳನೇನೆಂಬೆ! ಸರ್ವವೆಲ್ಲವೂ ಶಿವನಾದರೆ ಹಿಂದಣ ಯುಗ ಪ್ರಳಯಂಗಳೇಕಾದವು? ಸರ್ವವೆಲ್ಲವೂ ಶಿವನಾದರೆ ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸೂತ್ರಧಾರಿ, ನರರಿಗಾಗಿ ಯಂತ್ರವನಾಡಿಸುವಲ್ಲಿ ಹೊರಗಿದ್ದಾಡಿಸುವನಲ್ಲದೆ ತಾನೊಳಗಿದ್ದಾಡಿಸುವನೆ? ಅಹಂಗೆ ಶಿವನು ತನ್ನಾಧೀನವಾಗಿಪ್ಪ ತ್ರಿಜಗದ ಸಚರಾಚರಂಗಳ ತಾನು ಯಂತ್ರವಾಹಕನಾಗಿ ಆಡಿಸುವನಲ್ಲದೆ, ತಾನಾಡುವನೆ? ಸರ್ವಯಂತ್ರವೂ ತಾನಾದರೆ ಸಕಲತೀರ್ಥಕ್ಷೇತ್ರಯಾತ್ರೆಗೆ ಹೋಗಲೇಕೊ? ಇದು ಕಾರಣ, ಸರ್ವವೂ ಶಿವನೆನಲಾಗದು. ಸದಾಚಾರ ಸದ್ಭಕ್ತಿ ಸನ್ನಹಿತ ಲಿಂಗಜಂಗಮದೊಳಗಿಪ್ಪ, ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಯ್ಯಾ.