Index   ವಚನ - 201    Search  
 
ಗುರುಭಕ್ತಿ ಗುರುಭಜನೆಯಿಲ್ಲದವನ ಕೈಯಲು ಕರುಣವ ಪಡೆವ ನರಕಿಯ ನೆರೆಯಲ್ಲಿರಲಾಗದಯ್ಯಾ. ಶಿವಭಕ್ತಿ ಶಿವಭಜನೆಯಿಲ್ಲದವನ ಕೈಯಲಿ ಕರುಣವ ಪಡೆದ ಪಾಪಿಯ ಸಂಗವ ಮಾಡಲಾಗದು. ಶೈವಸನ್ಯಾಸಿ ಕಾಳಾಮುಖಿಯ ಗುರುವೆಂಬ ಅನಾಮಿಕನ ನೋಡಲಾಗದು, ಮಾತಾಡಿಸಲಾಗದು. ತಟ್ಟು ಮಟ್ಟಿಯನಿಟ್ಟ ಭ್ರಷ್ಟಂಗೆ ಶಿಶುವಾದ ಕಷ್ಟಭ್ರಷ್ಟನ ಮುಟ್ಟಲಾಗದು. ವಿಭೂತಿ ರುದ್ರಾಕ್ಷಿಗಳಲ್ಲಿ ಪ್ರೀತಿಯಿಲ್ಲದ ನರನ ಗುರುವೆಂಬ ಪಾತಕನ ಮಾತು ಬೇಡ. ಭಕ್ತರಲ್ಲದವರಲ್ಲಿ ಭಕ್ತಿಯಿಲ್ಲದವರಲ್ಲಿ ಭಕ್ತನಾದರೆ ಅವನ ಯುಕ್ತಿ ಬೇಡ. ಇವೆಲ್ಲವೂ ಇಲ್ಲದವರಲ್ಲಿ ಕರುಣವ ಹಡೆದು ಬಲುಹಿಂದ ನಡೆವವನ ಸೊಲ್ಲುಬೇಡ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಸಮಯಕ್ಕೆ ಸಮನಿಸದವನು ನಮಗೆ ಬೇಡಯ್ಯಾ.