Index   ವಚನ - 221    Search  
 
ಸದಾಚಾರಿಯಾದಡೆ: ಉಪ್ಪರಗುಡಿ ಸಿಂಧುಪತಾಕೆ, ಒಬ್ಬರಿಗೊಬ್ಬರು ಶರಣೆಂಬುದೆ ಸರ್ವತೀರ್ಥ. ಭಕ್ತನ ದೇಹವೆ ತ್ರಿಕೂಟಶಿವಾಲಯ, ಕಾಲೇ ಕಡೆದ ಕಂಬ, ಶಿರವೆ ಸುವರ್ಣದ ಕಳಶ, ಶಿವಾಚಾರ ಪೌಳಿ, ವಿಭೂತಿಯಲ್ಲಿ ಧವಳಿಸಿ, ಪರದೈವಕ್ಕಂಜೆವೆಂಬ ಅಗುಳಿ ದಾರವಟ್ಟ ಬಿಯಗವೊಪ್ಪುತ್ತಿರೆ, ಹಸ್ತಾಗ್ರಪೂಜೆ, ಶಾಂತವೆ ಅಗ್ಘಣಿ, ಸಜ್ಜನವೆ ಮಜ್ಜನ, ಸದಾ ಸನ್ನಹಿತವೆ ಲಿಂಗಪೂಜೆ, ಸತ್ಯವೆ ಅಡ್ಡಣಿಗೆ, ಸಮತೆ ಪರಿಯಾಣ, ಮನ ಮೀಸಲೋಗರ. ಲಿಂಗಬಣ್ಣಿಗೆಯ ಮೇಲೋಗರದಲ್ಲಿ ದೇವರೊಲಿದಾರೋಗಣೆಯ ಮಾಡುತ್ತಿರಲು ಹರುಷವೆ ಹಸ್ತಮಜ್ಜನ, ಪ್ರೀತಿಪ್ರೇಮವೆ ಕರ್ಪುರದ ವೀಳೆಯ, ಕಲಿತನದ ಝೇಘಂಟೆ, ಛಲಪದದ ಕಹಳೆ ಭೇರಿ, ವೀರವಂದನೆ ಮದ್ದಳೆ, ಕೇಳಿಕೆ ಸಂಪ್ರದಾಯವು. ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿ.