Index   ವಚನ - 243    Search  
 
ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು. ವೇದಶಾಸ್ತ್ರ ಪುರಾಣಾಗಮಂಗಳನರಿದ ಸಂಬಂಧಿಗಲ್ಲದೆ ಭೃತ್ಯಾಚಾರ ಅಳವಡದು ಅದೇನು ಕಾರಣ? ಅರಿದು ಭವಿಪಾಕವೆಂದು ಕಳೆದ ಬಳಿಕ ಜಂಗಮಕ್ಕೆ ನೀಡಿದರೆ ಅಧಿಕ ಪಾತಕ. ಅದೆಂತೆಂದರೆ: ತನ್ನ ಲಿಂಗಕ್ಕೆ ಸಲ್ಲದಾಗಿ, ಆ ಜಂಗಮಕ್ಕೆ ಸಲ್ಲದು. ಆ ಜಂಗಮಕ್ಕೆ ಸಲ್ಲದಾಗಿ, ತನ್ನ ಲಿಂಗಕ್ಕೆ ಸಲ್ಲದು. "ಲಿಂಗಭೋಗೋಪಭೋಗೀ ಯೋ ಭೋಗೇ ಜಂಗಮವರ್ಜಿತಃ| ಲಿಂಗಹೀನಸ್ಸ ಭೋಕ್ತಾ ತು ಶ್ವಾನಗರ್ಭೇಷು ಜಾಯತೇ"|| ಇದು ಕಾರಣ ಕೂಡಲಚೆನ್ನಸಂಗಮದೇವಾ ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.