Index   ವಚನ - 270    Search  
 
ಕಾಮಿಸಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು, ತನ್ನ ಕಾಯವ ಮುಟ್ಟಲೀಯದೆ ಲಿಂಗಾರ್ಪಿತವ ಮಾಡುವಲ್ಲಿ ಪ್ರಸಾದಿ. ಕಲ್ಪಿಸಿ ಬಂದ ಪದಾರ್ಥದ ಪೂರ್ವಾಶ್ರಯವ ಕಳೆದು, ತನ್ನ ಮುಟ್ಟಲೀಯದೆ ಲಿಂಗಾರ್ಪಿತವ ಮಾಡುವಲ್ಲಿ ಪ್ರಸಾದಿ. ಅಪ್ಪಿನ ಸೋಂಕಿನ ಸುಖದ ಸಂಯೋಗದ ಪೂರ್ವಾಶ್ರಯವ ಕಳೆದು, ತನ್ನ ತಟ್ಟದೆ ಮುಟ್ಟದೆ ಕೊಟ್ಟು ಕೊಳಬಲ್ಲನಾಗಿ ಪ್ರಸಾದಿ, ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.