Index   ವಚನ - 319    Search  
 
ಲಿಂಗವಿದ್ದ ಕಾಯದಲ್ಲಿ ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಆಸೆ ರೋಷ ಹರುಷವಿಲ್ಲ, ಮನ ಬುದ್ಧಿ ಚಿತ್ತಹಂಕಾರ ಮಾಯಾಪಾಶಬದ್ದನಲ್ಲ, ಮಾಯಾ ಶರೀರಿಯಲ್ಲ. ಕಾಮನೆಸಲಮ್ಮ, ಮಾಯೆ ಕೈಗೆಯ್ಯಲಮ್ಮದು. ಲಿಂಗಾನುಶರೀರಿಯಾಗಿದ್ದ ಕಾಯದ ಚರಿತ್ರವೆಂತೆಂದರೆ: ಲಿಂಗದಂತೆ ನಡೆವುದು, ಲಿಂಗದಂತೆ ನುಡಿವುದು, ಲಿಂಗಜಂಗಮದೊಳಗೆ ಬೆಳೆದನುಭಾವವ ಮಾಡೂದು. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರುಶನದಲ್ಲಿ ಲಿಂಗ ಸಮುಚ್ಚಯವಾಗಿ ಸನ್ನಹಿತ ಪ್ರಸಾದಿ. ಇದು ಕಾರಣ, ಹೊನ್ನಿನಲ್ಲಿ ಹೆಣ್ಣಿನಲ್ಲಿ ಆಶ್ರಿತನಲ್ಲ. ಭಕ್ತಿಸಾರಾಯವಾಗಿ ಬಂದುದನೆ ಕೊಂಬನು, ಅನ್ಯಸಾರಾಯ ಲಿಂಗಾರ್ಪಿತಕ್ಕೆ ಸಲ್ಲದಾಗಿ. ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಭಕ್ತಿಸಾರಾಯನಿವಾಸಿಯಾಗಿರ್ಪನು.