ಓಗರವ ಪ್ರಸಾದವ ಮಾಡಿ,
ಪ್ರಸಾದವ ಓಗರವ ಮಾಡಿ,
ಕೊಟ್ಟುಕೊಂಬನಾಗಿ ಆತ ಲಿಂಗಪ್ರಸಾದಿ
ರೂಪು ರಸ ಗಂಧ ಶಬ್ದ ಪರುಶ ಸಹಿತ
ಜಂಗಮಕ್ಕೆ ಅರ್ಪಿತವ ಮಾಡಿಕೊಂಬನಾಗಿ
ಆತ ಜಂಗಮಪ್ರಸಾದಿ.
ಸಪ್ತಧಾತು ಅಷ್ಟಮದವಿಲ್ಲಾಗಿ ಆತ ಲಿಂಗಪ್ರಸಾದಿ.
ಕಾಮ ಕ್ರೋಧ ಲೋಭ ಮೋಹ ಮದ
ಮತ್ಸರವಿಲ್ಲಾಗಿ ಆತ ಗುರುಪ್ರಸಾದಿ.
ಇದು ಕಾರಣ, ಕೂಡಲಚೆನ್ನಸಂಗಾ
ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆ.