Index   ವಚನ - 336    Search  
 
ಪ್ರಾಣವಾಯು ನೇತ್ರನಾಳ, ಅಪಾನವಾಯು ಜಿಹ್ವಾನಾಳ, ವ್ಯಾನವಾಯು ಅಧಮನಾಳ, ಉದಾನವಾಯು ಕಮಲನಾಳ, ಸಮಾನವಾಯು ಮುಖನಾಳ, ನಾಗವಾಯು ಶ್ರೋತ್ರನಾಳ, ಕೂರ್ಮವಾಯು ಕಂಠನಾಳ, ಕೃಕರವಾಯು ಚಂದ್ರನಾಳ, ದೇವದತ್ತವಾಯು ಸೂರ್ಯನಾಳ, ಧನಂಜಯವಾಯು ಬ್ರಹ್ಮನಾಳ, ಇಂತು ದಶವಾಯುಗಳ ಸ್ಥಾನ. ಪ್ರಾಣವಾಯು ಹರಿದಲ್ಲಿ ಲಿಂಗಪ್ರಾಣವಂ ಮರೆದು ತನುಮನಧನವೆ ಪ್ರಾಣವಾಗಿಹ. ಅಪಾನವಾಯು ಹರಿದಲ್ಲಿ ಲಿಂಗಬಯಕೆಯ ಮರೆದು ಷಡುರಸಾನ್ನದ ಬಯಕೆಯಾಗಿಹ. ವ್ಯಾನವಾಯು ಹರಿದಲ್ಲಿ [ಲಿಂಗ]ಧ್ಯಾನವಂ ಮರೆದು ಚತುರ್ವಿಧಪದವೇದ್ಯವಾಗಿಹ. ಉದಾನವಾಯು ಹರಿದಲ್ಲಿ ಲಿಂಗಗಮನವ ಬಿಟ್ಟು ಉದ್ದೇಶ ಗಮನಿಯಾಗಿಹ. ಸಮಾನವಾಯು ಹರಿದಲ್ಲಿ ಚತುರ್ವಿಧಸಾರವಂ ಮರೆದು ಕಲ್ಲು ಮರನಾಗಿಹ. ನಾಗವಾಯು ಹರಿದಲ್ಲಿ ಸುಭಾಷಿತ ಗೋಷ್ಠಿಯಂ ಕೇಳಲೊಲ್ಲದೆ ಕುಭಾಷಿತ ಕುಚಿತ್ತರ ಶಬ್ದವ ಕೇಳಿಹೆನೆಂಬ. ಕೂರ್ಮವಾಯು ಹರಿದಲ್ಲಿ ಸುಜ್ಞಾನವಂ ಬಿಟ್ಟು ಅಜ್ಞಾನ ಸಂಭಾಷಣೆಯಂ ಮಾಡುವ. ಕೃಕರವಾಯು ಹರಿದಲ್ಲಿ ಸುಗುಣವಂ ಬಿಟ್ಟು ದುರ್ಗುಣಕ್ಕೆ ಬೀರಿ ಬಡವಾಗುತ್ತಿಹ. ದೇವದತ್ತವಾಯು ಹರಿದಲ್ಲಿ ಆವ ವಿಚಾರವಂ ಮರೆದು ಕೋಪದಲುರಿದೇಳುತ್ತಿಹ. ಧನಂಜಯವಾಯು ಹರಿದಲ್ಲಿ ಅನೇಕಾಯಸದಿಂ ಗಳಿಸಿದಂಥ ಧನವನು ಲಿಂಗಜಂಗಮಕ್ಕೆ ವೆಚ್ಚಿಸಲೊಲ್ಲದೆ, ಅನರ್ಥವ ಮಾಡಿ ಕೆಡಿಸಿ ಕಳೆದು ಹೋಯಿತ್ತೆಂದು ಮರುಗುತ್ತಿಹ. ಇಂತೀ ದಶವಾಯುಗಳ ಭೇದವನರಿದು ಕೂಡಲಚೆನ್ನಸಂಗಯ್ಯನಲ್ಲಿ ನಿಲಿಸೂದೆ ಯೋಗ.