Index   ವಚನ - 392    Search  
 
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನುವಿನ ಭೇದವ ಭೇದಿಸಿ ಶ್ರೋತ್ರ ನೇತ್ರ ತ್ವಕ್ಕು ಘ್ರಾಣ ಜಿಹ್ವೆ [ಎಂಬ] ಪಂಚೇಂದ್ರಿಯವನರಿದು, ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂ[ಗಳ] ತೊರೆದು, ಪ್ರಾಣಾಪಾನ ವ್ಯಾನೋದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳ ಸಂಚವನರಿದು, ಮನಬುದ್ಧಿ ಚಿತ್ತಹಂಕಾರವೆಂಬ ಚತುರ್ವಿಧ ಕರಣಂಗಳನೊಂದು ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳಂ ಸುಟ್ಟು, ಜ್ಞಾನವನೆ ಬೆಳಗಿ, ಧ್ಯಾನವನೆ ನಿಲಿಸಿ, ಸುಚಿತ್ತದಲ್ಲಿ ಲಿಂಗಾರ್ಚನೆಯ ಮಾಡುವ ಶರಣ. "ವ್ಯಾಪಾರಂ ಸಕಲಂ ತ್ಯಕ್ತ್ವಾ ರುದ್ರೋ ರುದ್ರಂ ಸಮರ್ಚಯೇತ್" ಎಂಬ ಶ್ರುತಿಯ ನಿಮ್ಮ ಶರಣರಲ್ಲಿ ಕಾಣಬಹುದು ಕೂಡಲಚೆನ್ನಸಂಗಮದೇವಾ.