Index   ವಚನ - 524    Search  
 
ವಚನರಚನೆಯ ಅನುಭಾವವ ಬಲ್ಲೆವೆಂದೆಂಬರು ವಚನವಾವುದು ರಚನೆಯಾವುದು? ಅನುಭಾವವಾವುದು ಹೇಳಿರಣ್ಣಾ? ವಚನ: ಆತ್ಮತುಷ್ಟಿಯನರಿವುದು. ರಚನೆ: ಸ್ಥಾವರ ಲಿಂಗ ಜಂಗಮ ತ್ರಿವಿಧದಲ್ಲಿ ಕಾಣಬಲ್ಲರೆ. ಅನುಭಾವ: ಕಾಮದಿಚ್ಛೆಗೆ ಹರಿದು ಮದಮಚ್ಚರವಿಲ್ಲದಿರಬೇಕು, ಆಸೆಯಾಮಿಷ ಹರುಷದಿಚ್ಛೆಗೆ ಹರಿದು [ಯಾ]ಚಕನಾಗದಿರಬೇಕು, ಕಾಮ ಕ್ರೋಧ ಲೋಭ ಮೋಹ ಮದ ಮಚ್ಚರ ಆಶೆಯಾಮಿಷ ರೋಷಾದಿಗಳಂ ಹರಿದೊದೆದು, ಏಕೋಗ್ರಾಹಿಯಾಗಿ ನಿಂದಲ್ಲೇ ಅನುಬಾವಿ. ನಾಲ್ಕು ವೇದಶಾಸ್ತ್ರಂಗಳ ಬಲ್ಲೆವೆಂದು ನುಡಿವಾತನನುಭಾವಿಯೆ? ಅಲ್ಲ, ಅವು ಬ್ರಹ್ಮನೆಂಜಲು, ಇವ ಬಲ್ಲೆವೆಂದು ನುಡಿವಾತನನುಭಾವಿಯೆ? ಅಲ್ಲ, ಆತನು ಇದಿರ ನಂಬಿಸಿ ಉಂಬ ಭುಂಜಕನಯ್ಯಾ ಕೂಡಲಚೆನ್ನಸಂಗಮದೇವಾ.