Index   ವಚನ - 590    Search  
 
ಲಿಂಗಭಾಜನದಲ್ಲಿ ಸಹಭೋಜನವ ಮಾಡಿಹೆವೆಂದೆಂಬರು, ಲಿಂಗಭಾಜನದಲ್ಲಿ ಸಹಭೋಜನವ ಮಾಡುವವರ ನೋಡಿರೇ. ಲಿಂಗವಂತರೆಲ್ಲಾ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಆಸೆವುಳ್ಳನ್ನಕ್ಕ ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ? ಹಸಿವು ತೃಷೆ ನಿದ್ರೆ ಆಲಸ್ಯ ವ್ಯಸನವುಳ್ಳನ್ನಕ್ಕ, [ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ?] ಗುರುಲಿಂಗಜಂಗಮ ತ್ರಿವಿಧಸಂಪನ್ನತೆವುಳ್ಳನ್ನಕ್ಕ, ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಜ್ಞಾನಿಗಳು ತಾವೇ ಲಿಂಗವೆಂಬರು, ಲಿಂಗವೇ ತಾವೆಂಬರು. ತಾವೆ ಲಿಂಗವಾದರೆ ಜನನ ಮರಣ ರುಜೆ ತಾಗು ನಿರೋಧವಿಲ್ಲದಿರಬೇಡಾ? ಮಹಾಜ್ಞಾನವ ಬಲ್ಲೆವೆಂದು ತಮ್ಮ ಭಾಜನದಲ್ಲಿ ಲಿಂಗಕ್ಕೆ ನೀಡುವ ಪಾತಕರ ತೋರದಿರು, ಕೂಡಲಚೆನ್ನಸಂಗಮದೇವಾ.