ಅಜಾಂಡ ಮೊದಲಾದ ತ್ರಿಜಾಂಡದೊಳಗೆ
ಅಜಾಂಡ ಕೋಟಿಗಳು.
ನವಕೋಟಿಬ್ರಹ್ಮರೆಲ್ಲರೂ
ಹರ ನಿಮ್ಮ ಚರಣವನರಿಯರು.
ಎಲ್ಲಾ ಭವಭಾರಕರಾಗಿ,
ಶಿವ ನಿಮ್ಮ ಚರಣವನರಿಯರು.
ಜಡೆಯ ಕಟ್ಟಿ ಕರ್ಣ ಕುಂಡಲವನ್ನಿಕ್ಕಿ
ನಂದಿಯನೇರಿದ ರುದ್ರರು.
ಇಂಥ ನವಕೋಟಿರುದ್ರರೆಲ್ಲಾ ಹರ
ನಿಮ್ಮ ಚರಣವನರಿಯರು,
ಎಲ್ಲಾ ಭವಭಾರಕರಾಗಿ,
ಅಷ್ಟವೃಕ್ಷಫಲದೊಳು ಸ್ಥೂಲ ಸೂಕ್ಷ್ಮನಾಗಿ,
ಕೂಡಲಚೆನ್ನಸಂಗಾ
ನಿಮ್ಮ ಶರಣ ಅನಲನಾಹುತಿಯಮೇಳದಂತಿಪ್ಪ.