Index   ವಚನ - 869    Search  
 
ಭಕ್ತಸ್ಥಲ ಘನವೆಂದೆಂಬಿರಿ, ಭಕ್ತಸ್ಥಲಕ್ಕೆ ಮಾಹೇಶ್ವರಸ್ಥಲವೆ ಪ್ರತಿ, ಮಾಹೇಶ್ವರಸ್ಥಲಕ್ಕೆ ಪ್ರಸಾದಿಸ್ಥಲವೆ ಪ್ರತಿ, ಪ್ರಸಾದಿಸ್ಥಲಕ್ಕೆ ಪ್ರಾಣಲಿಂಗಿಸ್ಥಲವೆ ಪ್ರತಿ. ಪ್ರಾಣಲಿಂಗಿಸ್ಥಲಕ್ಕೆ ಶರಣಸ್ಥಲವೆ ಪ್ರತಿ, ಶರಣಸ್ಥಲಕ್ಕೆ ಐಕ್ಯಸ್ಥಲವೆ ಪ್ರತಿ. ಪ್ರತಿಯುಳ್ಳುದರಿವೆ? ಪ್ರತಿಯುಳ್ಳುದು ಜ್ಞಾನವೆ? ಪ್ರತಿಯುಳ್ಳುದು ನಿರ್ಭಾವವೆ? ಪ್ರತಿಯುಳ್ಳುದು ಮೋಕ್ಷವೆ? ಇಂತಿದು ಸ್ಥಲದ ಮಾರ್ಗವಲ್ಲ, ಸಾವಯವಲ್ಲ, ನಿರವಯವಲ್ಲ, ಸ್ಥಲವೂ ಅಲ್ಲ ನಿಃಸ್ಥಲವೂ ಅಲ್ಲ, ಒಳಗೂ ಅಲ್ಲ, ಹೊರಗೂ ಅಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣ.