ಅಂಗದ ಲಿಂಗವ ಲಿಂಗವೆಂದು ಪೂಜಿಸುವೆನೆ?
ಅದು ಅಂಗಲಿಂಗವಲ್ಲ. ಅದೇನು ಕಾರಣ?
ಅದು ಅಂಗದ ಮೇಲರತು ಮುಂದೆ
ಜಂಗಮವೆಂದು ತೋರಿತ್ತಾಗಿ.
ಜಂಗಮವ ಲಿಂಗವೆಂದು ಅರ್ಚಿಸಿ ಪೂಜಿಸಿಕೊಂಡಿಹೆನೆ?
ಆ ಜಂಗಮ ಲಿಂಗವಲ್ಲ. ಅದೇನು ಕಾರಣ?
ಮುಂದೆ ಪ್ರಸಾದಲಿಂಗವೆಂದು ತೋರಿತ್ತಾಗಿ.
ಆ ಪ್ರಸಾದಲಿಂಗವ ಲಿಂಗವೆಂದು
ಅರ್ಚಿಸಿ ಪೂಜಿಸಿಕೊಂಡಿಹೆನೆ?
ಅದು ಪ್ರಸಾದಲಿಂಗವಲ್ಲ, ಅದೇನು ಕಾರಣ?
ಮುಂದೆ ಮಹಾಪ್ರಸಾದವ ತೋರಿತ್ತಾಗಿ.
ಆ ಮಹಾಪ್ರಸಾದವೆ ನೀವಾಗಿ ಸುಖಿಯಾದೆ
ಕೂಡಲಚೆನ್ನಸಂಗಮದೇವಾ.