Index   ವಚನ - 899    Search  
 
ಅಂಗ ಸಂಸಾರವಿರಹದೊಳು ಸವೆದು, ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ, ಭುಜಂಗ ತಲೆಯೆತ್ತಿ ನೋಡಲು, ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ ಸದ್ಯೋಜಾತನ ಜತಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು, ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು ದೃಷ್ಟಿದೃಷ್ಟವಾದ [ಅ]ನಿಮಿಷನ ಕರಸ್ಥಲವ ಕಂಡು ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು ಆತನ ಬೆರಗು ನಿಮ್ಮ ಹೊಡೆದು ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ! ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು? ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಅನಿಮಿಷಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.