ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು
ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ
ಮಾಡಬೇಕಾದ ನಿಮಿತ್ತ,
ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ,
ಅವರು ಹೇಳಿದಂತೆ ಕ್ರಯವ ಕೊಟ್ಟು
ಮುಖಬಿನ್ನವಾದುದನುಳಿದು,
ಸ್ವಚ್ಛವಾದ ರುದ್ರಾಕ್ಷಿಗಳ
ಶ್ರೀಗುರುಲಿಂಗಜಂಗಮದ ಸನ್ನಿದಿಗೆ ತಂದು
ವೃತ್ತಸ್ಥಾನದ ಪರಿಯಂತರವು
ಧೂಳಪಾದೋದಕವ ಮಾಡಿ,
ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು,
ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ
ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ,
ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ,
ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ,
ಅವರಿಂದ ದಯಚಿತ್ತವ ಪಡೆದು,
ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು,
ಆ ಕರುಣಾಕಟಾಕ್ಷ ಮಾಲೆಗಳ ಭಿನ್ನವಿಟ್ಟು ಅರ್ಚಿಸದೆ,
ಅಭಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ
ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು,
ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ,
ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ.
ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು
ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ.
ಅದರ ವಿಚಾರವೆಂತೆಂದಡೆ:
ಕ್ರಿಯಾದೀಕ್ಷಾಯುಕ್ತನಾದ ಉಪಾಧಿಭಕ್ತಂಗೆ
ಗುರುಮಂತ್ರವ ಹೇಳುವುದಯ್ಯಾ.
ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ
ಅರ್ಥಪ್ರಾಣಾಭಿಮಾನಂಗಳ ನಿರ್ವಂಚಕತ್ವದಿಂದ ಸಮರ್ಪಿಸಿ
ನಡೆನುಡಿ ಸಂಪನ್ನನಾದ ನಿರುಪಾಧಿಭಕ್ತಂಗೆ
ಲಿಂಗಮಂತ್ರವ ಹೇಳುವುದಯ್ಯಾ.
ಇವರಿಬ್ಬರ ಆಚರಣೆಯ ಪಡೆದು
ಸಮಸ್ತ ಭೋಗಾದಿಗಳು ನೀಗಿಸಿ
ಸಚ್ಚಿದಾನಂದನಾದ ಸಹಜಭಕ್ತಂಗೆ
ಜಂಗಮಮಂತ್ರವ ಹೇಳುವುದಯ್ಯಾ.
ಆ ಮಂತ್ರಂಗಳಾವುವೆಂದಡೆ:
ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ,
ಶಿವಪ್ರಣವ ಹನ್ನೆರಡು
ಲಿಂಗಮಂತ್ರವೆನಿಸುವುದಯ್ಯಾ,
ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ.
ಇಂತು ವಿಚಾರದಿಂದ ಉಪಾಧಿ ನಿರುಪಾಧಿ
ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ.
ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು
ಶುದ್ಧಪ್ರಸಾದಪ್ರಣವ ಹನ್ನೆರಡು,
ಸಿದ್ಧಪ್ರಸಾದಪ್ರಣವ ಹನ್ನೆರಡು,
ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು,
ಇಂತು ವಿಚಾರದಿಂದ ಮೂವತ್ತಾರು
ಪ್ರಣವವನೊಡಗೂಡಿ,
ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ
ಇಷ್ಟಲಿಂಗ ಪರಿಯಂತರ
ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ.
ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ
ಪ್ರಾಣಲಿಂಗ ಪರಿಯಂತರ
ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ.
ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ
ಭಾವಲಿಂಗ ಪರಿಯಂತರ
ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ.
ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ
ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ
ಆಯಾಯ ಲಿಂಗಪ್ರಸಾದ ಒದಗುವುದೆಂದಾತ
ನಮ್ಮ ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Ayyā, kriyāvibhūtiya dharisida bhaktanu
cidrudrākṣiya dharisi mantradhyānava
māḍabēkāda nimitta,
prathamadalli rudrākṣimaṇigaḷa kramava māḍade,
avaru hēḷidante krayava koṭṭu
mukhabinnavādudanuḷidu,
svacchavāda rudrākṣigaḷa
śrīguruliṅgajaṅgamada sannidige tandu
vr̥ttasthānada pariyantaravu
dhūḷapādōdakava māḍi,
ā rudrākṣiya pūrvāśrayava kaḷedu,
Liṅgadhārakabhaktarinda gurupādōdaka modalāgi
śivapan̄cāmr̥tadinda ippattondu pūjeya māḍisi,
āmēle śrīguruliṅgajaṅgamada pādapūjege dharisi,
āmēle liṅgajaṅgamakke samarpisi,
avarinda dayacittava paḍedu,
śaraṇuhokku mahāprasādavendu besagoṇḍu,
ā karuṇākaṭākṣa mālegaḷa bhinnaviṭṭu arcisade,
abhinnasvarūpu mundugoṇḍu bahusuyidhānadinda
tanna toḍeya mēle mūrtava māḍikoṇḍu,
tanna jñānaprakāśavendu bhāvisi tanna tānarcisi,
Mantradhyānārūḍhanāgi tattat sthānadalli dharisuvudayyā.
Intu vibhūti rudrākṣiya dharisi liṅganiṣṭhāparanāda bhaktanu
sthalameṭṭigeyinda āyāya mantrava hēḷuvudayyā.
Adara vicāraventendaḍe:
Kriyādīkṣāyuktanāda upādhibhaktaṅge
gurumantrava hēḷuvudayyā.
Kriyādīkṣeya paḍedu guruliṅgajaṅgamadalli
arthaprāṇābhimānaṅgaḷa nirvan̄cakatvadinda samarpisi
naḍenuḍi sampannanāda nirupādhibhaktaṅge
liṅgamantrava hēḷuvudayyā.
Ivaribbara ācaraṇeya paḍedu
samasta bhōgādigaḷu nīgisi
Saccidānandanāda sahajabhaktaṅge
jaṅgamamantrava hēḷuvudayyā.
Ā mantraṅgaḷāvuvendaḍe:
Śaktipraṇava hanneraḍu gurumantravenisuvudayyā,
śivapraṇava hanneraḍu
liṅgamantravenisuvudayyā,
śivaśaktirahitavāda hanneraḍu jaṅgamamantravenisuvudayyā.
Intu vicāradinda upādhi nirupādhi
sahajabhakta mahēśvararācarisuvudayyā.
Innu nirābhāri vīraśaivanirvāṇa sadbhaktajaṅgamagaṇaṅgaḷu
śud'dhaprasādapraṇava hanneraḍu,
sid'dhaprasādapraṇava hanneraḍu,
prasid'dhaprasādapraṇava hanneraḍu,
intu vicāradinda mūvattāru
praṇavavanoḍagūḍi,
śud'dhaprasādapraṇava ācāraliṅga guruliṅga
Iṣṭaliṅga pariyantara
trividha liṅgakkendu māḍuvudayyā.
Sid'dhaprasādapraṇava śivaliṅga jaṅgamaliṅga
prāṇaliṅga pariyantara
trividhaliṅgakkendu māḍuvudayyā.
Prasid'dhaprasādapraṇava prasādaliṅga mahāliṅga
bhāvaliṅga pariyantara
trividhaliṅgakkendu māḍuvudayyā.
Hīge harukillade sthalameṭṭigeyinda
karuṇisida guruviṅge besagoṇḍa śiṣyōttamaṅge
āyāya liṅgaprasāda odaguvudendāta
nam'ma kūḍalacennasaṅgamadēva.