Index   ವಚನ - 963    Search  
 
ಅಯ್ಯಾ, ಸಹಜಲಿಂಗಧಾರಕ ಭಕ್ತ ಉಪಾಧಿಭಕ್ತರು [ವಿಭೂತಿ] ಗುರುಪಾದೋದಕದಲ್ಲಿ ಸಮ್ಮಿಶ್ರವ ಮಾಡಿ ಧರಿಸುವದಯ್ಯಾ. ನಿರುಪಾಧಿಭಕ್ತ, ಸಹಜಭಕ್ತರು ಗುರುಪಾದೋದಕ -ಲಿಂಗಪಾದೋದಕ ಸಮ್ಮಿಶ್ರವ ಮಾಡಿ ಷಡಕ್ಷರಮಂತ್ರವ ಸ್ಥಾಪಿಸಿ ಧರಿಸುವದಯ್ಯಾ. ನಿರ್ವಂಚಕಭಕ್ತ-ನಿರ್ವಾಣಶರಣಗಣಂಗಳು ಗುರುಪಾದೋದಕದಲ್ಲಿ ಘಟ್ಟಿಯ ಕುಟ್ಟಿ ಲಿಂಗಪಾದೋದಕವ ಆ ಘುಟ್ಟಿಗೆ ಸಮ್ಮಿಶ್ರವ ಮಾಡಿ ಆದಿ ಪ್ರಣಮಗಳಾರು ಅನಾದಿ ಪ್ರಣಮಗಳಾರು ಚಿತ್ಕಲಾ ಪ್ರಸಾದ ಪ್ರಣಮಗಳಾರು ನಿಷ್ಕಳಂಕ ಚಿತ್ಕಲಾಮೂಲ ಪ್ರಣಮ ಮೂರು ಇಂತು ಇಪ್ಪತ್ತೊಂದು ಪ್ರಣಮಂಗಳ ಸ್ಥಾಪಿಸಿ ಜಂಗಮಮೂರ್ತಿಗಳು ಧರಿಸಿದ ಮೇಲೆ ಧರಿಸುವುದಯ್ಯಾ. ಹಿಂಗೆ ಧರಿಸಿದವರಿಗೆ ನಿಜಕೈವಲ್ಯಪದವಾಗುವದೆಂದಾತ ನಮ್ಮ ಕೂಡಲಚೆನ್ನಸಂಗಮದೇವ.