Index   ವಚನ - 1237    Search  
 
ಜಂಗಮ ಜಂಗಮವೆಂದರೆ ಬಾಯಿಲೆಕ್ಕವೆ ಜಂಗಮ? ಜಂಗಮ ಜಂಗಮವೆಂದರೆ ಉಪಾಧಿಕನೆ ಜಂಗಮ? ಜಂಗಮ ಜಂಗಮವೆಂಬುದೇನೊ ಬೋಧಕನೆ ಜಂಗಮ? ಜಂಗಮ ಜಂಗಮವೆಂಬುದೇನೊ ಆಶ್ರಿತನೆ ಜಂಗಮ? ಜಂಗಮ ಜಂಗಮವೆಂಬುದೇನೊ ಕಾರ್ಯಕಾರಣನೆ ಜಂಗಮ? ಜಂಗಮ ಜಂಗಮವೆಂಬುದೇನೊ ಸ್ತ್ರೀಲಂಪಟನೆ ಜಂಗಮ? ಈ ಷಡ್ಗುಣದಿಚ್ಛುಕರ ಜಂಗಮವೆಂಬೆನೆ? ಎನ್ನೆನು. ಈ ಪಾತಕದ ನುಡಿಯ ಕೇಳಲಾಗದು. ಜಂಗಮವೆಂತಹನೆಂದರೆ: ನಿರವಯ ಜಂಗಮ, ನಿರುಪಾಧಿಕ ಜಂಗಮ, ನಿರ್ಬೋಧಕ ಜಂಗಮ, ನಿರಾಶ್ರಿತ ಜಂಗಮ, ನಿಃಕಾರಣ ಜಂಗಮ, ನಿರ್ಲಂಪಟ ಜಂಗಮ- ಇಂತಪ್ಪುದೆ ಕಾರಣವಾಗಿ ಪ್ರಭುದೇವರಿಗೆ ಶರಣೆಂದು ಬದುಕಿದ ಬಸವಣ್ಣ. ಅವರಿಬ್ಬರ ಒಕ್ಕುದ ಕೊಂಡು, ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.