ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ
ಶ್ರೀಗಂಧದಂತೆ ಇರಬೇಕು.
ಅದು ಹೇಂಗೆ?
ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ
ಬಣ್ಣ ಅಧಿಕವಲ್ಲದೆ ಕಿರಿದಾಗದು,
ಇವರು ನನ್ನನೇಕೆ ಘಾಸಿ ಮಾಡಿದರೆನ್ನದು.
ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು,
ಬಂದ ರಸವನಟ್ಟಡೆ, ನಾನಾ ಪ್ರಕಾರದಲ್ಲಿ
ಸಾಯಸಗೊಳಿಸಿದಡೆಯೂ
ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು,
ನನ್ನನೇಕೆ ನೋಯಿಸಿದರೆಂದೆನ್ನದು.
ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ
ಬೆಂಕಿಯೊಳಗೆ ಹಾಯಿಕಿದಡೆ
ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು,
ತನ್ನಲ್ಲಿ ದುಃಖಗೊಳ್ಳದು.
ಈ ತ್ರಿವಿಧದ ಗುಣದ ಪರಿಯಲ್ಲಿ
ಭಕ್ತನು ತನ್ನ ಸುಗುಣವ ಬಿಡದ ಕಾರಣ
ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ
ಪ್ರಾಣಲಿಂಗಿಯಹ ಶರಣನಹ ಐಕ್ಯನಹ.
ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ
ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Jaṅgamabhaktanu, cinnadante kabbinante
śrīgandhadante irabēku.
Adu hēṅge?
Ā cinnava kāsidaḍe karagisidaḍe kaḍidaḍe nigucidaḍe
baṇṇa adhikavallade kiridāgadu,
ivaru nannanēke ghāsi māḍidarennadu.
Ā kabba kaḍidaḍe khaṇḍisidaḍe gāṇadalikki hiṇḍi, hiḷidu,
banda rasavanaṭṭaḍe, nānā prakāradalli
sāyasagoḷisidaḍeyū
mige mige madhuravāgippudallade viṣavāgadu,
nannanēke nōyisidarendennadu.
Ā śrīgandhavu koredaḍe tēdaḍe hūsidaḍe
beṅkiyoḷage hāyikidaḍe
Parimaḷa ghanavāyittallade durgandhavāgadu,
tannalli duḥkhagoḷḷadu.
Ī trividhada guṇada pariyalli
bhaktanu tanna suguṇava biḍada kāraṇa
sadbhaktanaha māhēśvaranaha prasādiyaha
prāṇaliṅgiyaha śaraṇanaha aikyanaha.
Intu ṣaṭsthaladalli sampannanahaḍe
intappa jaṅgamabhaktiye mūlavayya
kūḍalacennasaṅgamadēvā.