Index   ವಚನ - 1255    Search  
 
ಜಾತಕರ್ಮ ಶುಭಕರ್ಮ ಪ್ರೇತಕರ್ಮವ ಮಾಡುವರು ಲೋಕದ ಮನುಜರು. ಅದೆಂತೆಂದಡೆ: ಈರಿಲು, ಮೂವಟ್ಟಲು, ಹಸೆ-ಹಂದರ, ತೊಂಡಿಲು ಬಾಸಿಂಗ; ಹಣೆಯಕ್ಕಿ-ಹೆಣನ ಸಿಂಗಾರ-ಶ್ರಾದ್ಧಕೂಳು- ಈ ಪರಿಯ ಮಾಡುವನೆ ಶಿವಭಕ್ತ? [ಅಲ್ಲ]. ಅದೆಂತೆಂದಡೆ; ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ, ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ, ದೇವರಪಾದಕ್ಕೆ ಸಂದಲ್ಲಿ ಶಿವಭಕ್ತಂಗೆ ವಿಭೂತಿವೀಳೆಯಂಗೊಟ್ಟು ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ. ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ, ಲಿಂಗದೂರ ಅಘೋರನರಕಿಯಯ್ಯಾ, ಕೂಡಲಚೆನ್ನಸಂಗಮದೇವಾ.