Index   ವಚನ - 1256    Search  
 
ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ? ಜಾತಿವಿಡಿದು ಕಳೆಯಿತ್ತೆ ಜಾತಿತಮವು? ಅಜಾತಂಗೆ ಆವುದು ಕುಲ? ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; "ದೀಯತೇ ಜ್ಞಾನಸಂಬಂಧಃ ಕ್ಷೀಯತೇ ಚ ಮಲತ್ರಯಮ್| ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ"|| ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ, ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು, ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗಳ ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ.