Index   ವಚನ - 1263    Search  
 
ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ ಮೇಲಿಕ್ಕಿಕೊಂಡಿರ್ದಡೆ ಹಸಿವು ಹೋಗಿ ಅಪ್ಯಾಯನವಹುದೆ? ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು? ಅಂಗವೂ ಲಿಂಗವೂ ಕೂಡುವ ಭೇದವನರಿಯದವರು ಗುರುತಲ್ಪಕರು, ಪಂಚಮಹಾಪಾತಕರು. ಅದೆಂತೆಂದಡೆ: "ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಮ್| ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಂಕ್ತೇ ಸುಖಾವಹಮ್"|| ಮತ್ತೆಯೂ "ಅಂಗಾನಾಂಲಿಂಗಸಂಬಂಧೋಲಿಂಗಾನಾಮಂಗಸಂಯುತಿಃ| ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ"|| ಎಂದುದಾಗಿ, ಅಂಗದಲ್ಲಿ ಲಿಂಗ ಒಡಗಲಸಬೇಕು, ಲಿಂಗದಲ್ಲಿ ಅಂಗ ಒಡಗಲಸಬೇಕು. ಇದು ಕಾರಣ, ಎಲ್ಲರೂ ಅಂಗಸಂಬಂಧಿಗಳಲ್ಲದೆ ಲಿಂಗಸಂಬಂಧಿಗಳಪೂರ್ವ ಕಾಣಾ- ಕೂಡಲಚೆನ್ನಸಂಗಮದೇವಾ.