ಜ್ಞಾನಾಮೃತಜಲನಿಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು.
ನೀರ ಮೊಗೆವರು ಬಂದು ನೂಕಿದಲ್ಲದೆ ತೆರಳದು.
ಮರಳಿ ಮುಸುಕುವುದ ಮಾಣಿಸಯ್ಯಾ.
ಆಗಳೂ ಎನ್ನುವ ನೆನೆವುತ್ತಿರಬೇಕೆಂದು
ಬೇಗ ಗುರು ಅಪ್ಪೈಸಿ
ತನ್ನ ಪ್ರಸಾದವೆಂದು ಕುರುಹ ಕರಸ್ಥಲದಲ್ಲ್ಲಿಕೊಟ್ಟನು,
ದಿವಾರಾತ್ರಿ ತನ್ನನರಿಯಬೇಕೆಂದು.
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ
ಅರೆಮರುಳರ ಮೆಚ್ಚುವನೆ
ನಮ್ಮ ಕೂಡಲಚೆನ್ನಸಂಗಮದೇವ.