ನಿಮನಿಮಗೆಲ್ಲಾ ಬಲ್ಲೆವೆಂದೆಂಬಿರಿ.
ಹರಿ ಹತ್ತು ಭವಕ್ಕೆ ಬಂದಲ್ಲಿ, ಅಜನ ಶಿರವರಿದಲ್ಲಿ
ಅಂದೆಲ್ಲಿಗೆ ಹೋದವೋ ನಿಮ್ಮ
ವೇದಶಾಸ್ತ್ರಾಗಮ ಪುರಾಣಂಗಳೆಲ್ಲಾ.
ಚೆನ್ನಯ್ಯನ ಕೈಯಲ್ಲಿ ಹಾಗವನೆ ಕೊಟ್ಟು
ಕಂಕಣದ ಕೈಯ ಕಂಡು ಧನ್ಯರಾಗಿರೆ ನೀವು.
ಮಾತಂಗಿಯ ಮಕ್ಕಳೆಂದು,
ಗಗನದಲ್ಲಿ ಸ್ನಾನವ ಮಾಡೆ
ಆಕಾಶದಲ್ಲಿ ಧೋತ್ರಂಗಳು ಹಾರಿ ಹೋಗಲಾಗಿ,
ನಮ್ಮ ಶ್ವಪಚಯ್ಯಗಳ ಕೈಯಲ್ಲಿ ಒಕ್ಕುದ ಕೊಂಡು
ಧನ್ಯರಾಗರೆ ಸಾಮವೇದಿಗಳಂದು?
ನಿಮ್ಮ ನಾಲ್ಕು ವೇದವನೋದದೆ
ನಮ್ಮ ಭಕ್ತರ ಮನೆಯ `ಕಾಳʼನು?
ಇದು ಕಾರಣ,
ನಮ್ಮ ಕೂಡಲಚೆನ್ನಸಂಗನ ಶರಣರ ಮುಂದೆ
ಈ ಒಡ್ಡುಗಳ ಮಾತ ಪ್ರತಿ ಮಾಡಬೇಡ.