ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು,
ನಿಟ್ಟೆಲುವ ನೆಟ್ಟನೆ ಮಾಡಿ,
ಅಧೋಮುಖ ಕಮಲವ ಬಲಿದು,
ಊರ್ಧ್ವಮುಖವ ಮಾಡಿ,
ಇಂದ್ರಿಯಂಗಳನು ಏಕಮುಖವ ಮಾಡಿ,
ಚಂದ್ರ ಸೂರ್ಯರನೊಂದೆ ಠಾವಿನಲ್ಲಿರಿಸಿ
ಅತ್ತಿತ್ತ ಮಿಸುಕದೆ ನಡುನೀರ ಜ್ಯೋತಿಯ ದೃಢವಾಗಿ ಹಿಡಿದು,
ಪರಮಾನಂದದ ಮಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ
ಮಹಾಮಹಿಮರ ತೋರಿ ಬದುಕಿಸಾ,
ಕೂಡಲಚೆನ್ನಸಂಗಯ್ಯಾ.