Index   ವಚನ - 1385    Search  
 
ಪೂರ್ವಜನ್ಮವ ನಿವೃತ್ತಿಯ ಮಾಡಿ ಶ್ರೀಗುರುಕರಕಮಲದಲ್ಲಿ ಜನಿಸಿದ ಭಕ್ತನ ಪಂಚಭೌತಿಕದ ತನುವಿನಂತೆ ವರ್ಣಿಸಿ ನುಡಿಯಬಹುದೆ? ಉತ್ತಮಾಧಮ ತೃಣ ಮೊದಲಾದುವೆಲ್ಲವು ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುವು ಕೇಳಿರೆ. ಜ್ಯೋತಿರ್ಮಯಲಿಂಗವ ಮುಟ್ಟಿದ ತನು ಕೇವಲ ಜ್ಯೋತಿರ್ಮಯಲಿಂಗ. ಆಧಾರ, ಸ್ವಾಧಿಷ್ಠಾನ, ಮಣಿಪೂರಕ ಅನಾಹತ, ವಿಶುದ್ಧಿ, ಆಜ್ಞೇಯ ಬ್ರಹ್ಮರಂಧ್ರ ದಳ ಕಳೆ ವರ್ಣ ಅಧಿದೇವತೆ ಎಂದು, ಅಲ್ಲಿ ಶುಕ್ಲ ಶೋಣಿತಾತ್ಮಕನಂತೆ ವರ್ಣಿಸಿ ನುಡಿಯಬಹುದೆ, ಶಿವಲಿಂಗತನುವ? ಷಡಾಧಾರಚಕ್ರವನು ಎನ್ನ ಸರ್ವಾಂಗದಲ್ಲಿ ಪ್ರತಿಷ್ಠೆಯ ಮಾಡಿ, ಅಂತರ್ಬಾಹ್ಯದಲ್ಲಿ ಭರಿತನಾಗಿ ಸರ್ವಾಂಗವ ಲಿಂಗವ ಮಾಡಿದ, ಕೂಡಲಚೆನ್ನಸಂಗಾ ಶ್ರೀಗುರುಲಿಂಗ.