Index   ವಚನ - 1386    Search  
 
ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ ಮೇಲೆ ಲಿಂಗವ ಧರಿಸಿ ಲಿಂಗವಂತರೆನಿಸಿದ ಮೇಲೆ, ಮತ್ತೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸ್ಸೂತಕ, ಎಂಜಲಸೂತಕ ಬಿಡದನ್ನಕ್ಕರ ಇವರನೆಂತು ಭಕ್ತರೆಂಬೆನಯ್ಯಾ? ಇವರನೆಂತು ಯುಕ್ತರೆಂಬೆನಯ್ಯಾ? ಇವರನೆಂತು ಮುಕ್ತರೆಂಬೆನಯ್ಯಾ? ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು, ಹಸ್ತಮಸ್ತಕಸಂಯೋಗವಂ ಮಾಡಿ, ಕರ್ಣಮಂತ್ರಮಂ ತುಂಬಿ, ಕರಸ್ಥಲಕೆ ಶಿವಲಿಂಗಮಂ ಬಿಜಯಂಗೈಸಿ ಕೊಟ್ಟ ಬಳಿಕ, ಕಾಡ್ಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸಿದಂತಿರಬೇಕು ಭಕ್ತನು! ಹಿಂದೆ ಮೆದೆಯಿಲ್ಲ ಮುಂದೆ ನಿಲವಿಲ್ಲ- ಇದು ಕಾರಣ ಕೂಡಲಚೆನ್ನಸಂಗಯ್ಯಾ, ನಿಮ್ಮ ಸದ್ಭಕ್ತರು ಸೂತಕವ ಮಾಡಲಿಲ್ಲ.